ರೈತರ ಪ್ರತಿಭಟನೆಗೆ ರಾಷ್ಟ್ರ ವಿರೋಧಿ ಶಕ್ತಿಗಳ ಷಡ್ಯಂತರ: ಬಿಜೆಪಿ
ಉಡುಪಿ, ಡಿ.8: ಖಲಿಸ್ತಾನ್ ಚಳವಳಿಯ ಮೂಲಕ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಕೆನಡಾ ಮತ್ತು ಲಂಡನ್‌ನಲ್ಲಿರುವ ವಾಮ ಪಂಥಿಯರು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವುದು ರಾಷ್ಟ್ರ ವಿರೋಧಿ ಶಕ್ತಿಗಳ ಷಡ್ಯಂತ್ರಕ್ಕೆ ಸಾಕ್ಷಿಯಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಆರೋಪಿಸಿದ್ದಾರೆ.
ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಸುಧಾರಣೆಗೆ ಸಂಬಂಧಿಸಿ ಮಹತ್ವದ ಮಸೂದೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಆದರೆ ಇದರ ವಿರುದ್ಧ ದಲ್ಲಾಳಿಗಳು ಮತ್ತು ಕಮಿಷನ್ ಏಜೆಂಟರು ರಾಜಕೀಯ ದುರು ದ್ದೇಶದೊಂದಿಗೆ ರೈತರ ಮುಖವಾಡ ಧರಿಸಿ, ರೈತರನ್ನು ದಾರಿ ತಪ್ಪಿಸಲು ಭಾರತ ಬಂದ್‌ಗೆ ಕರೆ ನೀಡಿದ್ದಾರೆ ಎಂದು ದೂರಿದರು.
ಕೃಷಿ ಉತ್ಪನ್ನ ದಾಸ್ತಾನು ಮತ್ತು ಕೃಷಿ ಮಾರುಕಟ್ಟೆ ಸಮಿತಿಗಳ ಏಕಸ್ವಾಮ್ಯವನ್ನು ತಪ್ಪಿಸುವ ಉದ್ದೇಶದಿಂದ ಕೃಷಿ ಸುಧಾರಣಾ ಮಸೂದೆ ಗಳನ್ನು ಅನುಷ್ಠಾನಕ್ಕೆ ತರ ಲಾಗಿದೆ. ಆದರೆ ದೇಶಾದ್ಯಂತ ಸೋತಿರುವ ವಿರೋಧ ಪಕ್ಷಗಳು, ಹತಾಶೆಯಿಂದ ರೈತರನ್ನು ಮೋದಿ ಸರಕಾರದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿವೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ, ಸಹ ಸಂಚಾಲಕ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.







