ಮೂಡುಬೆಟ್ಟು: ಅಂಬೇಡ್ಕರ್ ಸಮುದಾಯ ಭವನಕ್ಕೆ ಶಂಕು ಸ್ಥಾಪನೆ

ಉಡುಪಿ, ಡಿ.8: ಮೂಡುಬೆಟ್ಟು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ಡಿ.6ರಂದು ಜರಗಿದ ಆಂಬೇಡ್ಕರ್ ಅವರ 64ನೇ ಪರಿನಿಬ್ಬಾಣ ಕಾರ್ಯಕ್ರಮದ ಉದ್ಘಾಟನೆ ಹಾಗೂ 25ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಸಮುದಾಯ ಭವನದ ಶಂಕುಸ್ಥಾಪನೆಯನ್ನು ಉಡುಪಿ ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ನೆರವೇರಿಸಿರು.
ಬಳಿಕ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶಕ್ಕೆ ಮಾತ್ರವಲ್ಲ, ಅವರು ವಿಶ್ವಮಾನವರಾಗಿದ್ದಾರೆ. ಈ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ಸಂವಿಧಾನ ದಲ್ಲಿ ಒದಗಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಲಿಕರ್ ಮಾತನಾಡಿ, ಭವನಕ್ಕೆ ಬೇಕಾದ ಸೂಕ್ತ ಅನುದಾನ ಹಾಗೂ ದಲಿತರ ಮೂಲಭೂತ ಸೌಕರ್ಯಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷತೆಯನ್ನು ಸ್ಥಳೀಯ ನಗರಸಭಾ ಸದಸ್ಯ ಶ್ರೀಶ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ, ದಲಿತ ಮುಖಂಡರಾದ ಶ್ಯಾಮ್ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ತರ್, ಶಿವಾನಂದ ಮೂಡುಬೆಟ್ಟು, ಮಹಿಳಾ ಮಂಡಲ ಅಧ್ಯಕ್ಷೆ ಜಾನಕಿ, ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್, ಜಗದೀಶ್, ಮೋಹನ, ಸುಧಾಕರ, ಹರೀಶ್, ಅಕ್ಕಣಿ ಟೀಚರ್, ಯುವಕ ಮಂಡಲದ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.
ಸುರೇಂದ್ರ ಕೋಟ್ಯಾನ್ ವಂದಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಶಂಕರ್‌ದಾಸ್ ಕಾರ್ಯಕ್ರಮ ನಿರೂಪಿಸಿದರು.







