ಕೇರಳ-ಪಂಜಾಬ್ ಮಾದರಿಯಲ್ಲಿ ಕಾಯ್ದೆ ಜಾರಿಗೆ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು, ಡಿ.8: ಕನಿಷ್ಠ ಬೆಂಬಲ ಬೆಲೆ(ಎಂಎಸ್‍ಪಿ)ಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳು ಮಾರಾಟವಾದರೆ ಕೊಂಡುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇರುವಂತೆ ಕೇರಳ ಹಾಗೂ ಪಂಜಾಬ್ ರಾಜ್ಯ ಸರಕಾರಗಳು ಕಾಯ್ದೆ ರೂಪಿಸಿದ್ದು, ರಾಷ್ಟ್ರಪತಿಯ ಅಂಕಿತಕ್ಕೆ ಕಳುಹಿಸಿದ್ದಾರೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಕಾಯ್ದೆ ಜಾರಿಗೆ ತಂದರೆ ರೈತರಿಗೆ ಅನುಕೂಲವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ತೊಗರಿ ಮಂಡಳಿ ಮಾದರಿಯಲ್ಲಿ ಭತ್ತಕ್ಕೂ ಒಂದು ಮಂಡಳಿ ಮಾಡಿದರೆ ಉತ್ತಮ. ತರಕಾರಿ, ಹಣ್ಣು, ಹೂವು, ಬೆರೆ ಬೆಳೆಗಳನ್ನು ಎಂಎಸ್‍ಪಿ ಅಡಿಯಲ್ಲಿ ಬರಬೇಕು ಎಂಬುದು ನಮ್ಮ ಒತ್ತಾಯ ಎಂದರು.
ರಾಜ್ಯದಲ್ಲಿ 41 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಬೆಳೆದಿದ್ದಾರೆ. ರಾಜ್ಯ ಸರಕಾರವು ಒಂದು ಲಕ್ಷ ಮೆಟ್ರಿಕ್ ಟನ್ ಕೆಎಂಎಫ್ ಮೂಲಕ ಖರೀದಿಸುವುದಾಗಿ ಹೇಳಿದೆ. ಆದರೆ, ಉಳಿದವರ ಪರಿಸ್ಥಿತಿ ಏನಾಗಬೇಕು. ಇವತ್ತು ಎಂಎಸ್‍ಪಿ 1850 ರೂ. ಇದೆ. ರೈತರಿಗೆ ಒಂದು ಮೆಟ್ರಿಕ್ ಟನ್‍ಗೆ 600-700 ರೂ.ನಷ್ಟವಾಗುತ್ತದೆ. ರೈತರ ಸಮಸ್ಯೆಗಳನ್ನು ಸರಕಾರ ಆದ್ಯತೆ ಮೇರೆಗೆ ಪರಿಹರಿಸಲು ಪ್ರಯತ್ನ ಮಾಡಬೇಕು. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಎಲ್ಲ ಬೆಳೆಗಳನ್ನು ಎಂಎಸ್‍ಪಿ ಅಡಿಯಲ್ಲಿ ತರಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಬಂದರೆ ಸುವರ್ಣ ಯುಗ ಆಗುತ್ತದೆ ಎಂದರು. ಈಗ ಅದನ್ನು ಮಾಡಿಸಿ. ಕೇಂದ್ರ ಸರಕಾರ ಸುಮ್ಮನೆ ಎಲ್ಲವನ್ನೂ ಒಪ್ಪಲ್ಲ. ಸರಕಾರ ನಿರಂತರವಾಗಿ ಒತ್ತಡ ಹಾಕಬೇಕು. 25 ಜನ ಬಿಜೆಪಿ ಸಂಸದರು ಪ್ರಧಾನಿ ಬಳಿ ಹೋಗಿ ಪಡಿತರ ವ್ಯವಸ್ಥೆಯಲ್ಲಿ ಮೆಕ್ಕಜೋಳ ಮಾರಾಟ ಮಾಡಲು ಸಾಧ್ಯವಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಮುಂದಾಗುವಂತೆ ಮನವೊಲಿಸಲಿ ಎಂದು ಅವರು ಹೇಳಿದರು.
ಬೆಳೆಗಳು ಕಟಾವಿಗೆ ಬರುವ ಮುಂಚೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಮಧ್ಯವರ್ತಿಗಳು ರೈತರಿಗೆ ಶೋಷಣೆ ಮಾಡದಂತೆ ತಡೆಯೊಡ್ಡಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆ ಕೈ ಬಿಟ್ಟರೆ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಜೊತೆಗೆ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳಿಂದ ಇನ್ನು ಹೆಚ್ಚಿನ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದಲ್ಲಿ ಎಪಿಎಂಸಿಗಳನ್ನು ಮುಚ್ಚಲು ಇದು ಸಕಾಲ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎಪಿಎಂಸಿಗಳನ್ನು ಮುಚ್ಚುವುದಿಲ್ಲ ಎನ್ನುತ್ತಾರೆ. ಪ್ರಧಾನಿ ಹಾಗೂ ಹಣಕಾಸು ಸಚಿವರ ನಡುವಿನ ಹೇಳಿಕೆಗಳಲ್ಲಿ ಗೊಂದಲ ಯಾಕೆ? ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಕೃಷಿ ಮಾರುಕಟ್ಟೆಗಳು ಮುಚ್ಚಿ ಹೋಗಿ, ಖಾಸಗಿಯವರಿಗೆ ಮುಕ್ತ ಅವಕಾಶ ಸಿಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, 2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು, ರೈತರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ತಡೆಯಲು ಹಣ್ಣು, ತರಕಾರಿಗಳನ್ನು ಎಪಿಎಂಸಿಗಳ ಹೊರಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಸೂಚಿಸಿದ್ದರು. ಆದರೆ, ಇವತ್ತು ನಾವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಅದನ್ನೆ ಮಾಡಲು ಮುಂದಾಗಿದ್ದೇವೆ. ನೀವು ಯಾಕೆ ವಿರೋಧಿಸುತ್ತಿದ್ದೀರಾ ಅನ್ನೋದು ಅರ್ಥವಾಗುತ್ತಿಲ್ಲ ಎಂದರು.
ಅದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹಣ್ಣು, ತರಕಾರಿಗಳನ್ನು ಹೆಚ್ಚು ದಿನ ದಾಸ್ತಾನು ಇಡಲು ಸಾಧ್ಯವಿಲ್ಲ. ಆದುದರಿಂದ, ಹಣ್ಣು ಮತ್ತು ತರಕಾರಿಗಳಿಗೆ ಸೀಮಿತವಾಗಿ ನಾನು ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿ ಮಾರಾಟ ಮಾಡಬೇಕು ಎಂಬ ಆಯ್ಕೆ ಸಿಗುವಂತಾಗಬೇಕು ಎಂದು ಅವಕಾಶ ಕೊಡುವಂತೆ ಹೇಳಿದ್ದೇನೆಯೇ ಹೊರತು, ಭತ್ತ, ರಾಗಿ, ಜೋಳ ಎಲ್ಲವನ್ನೂ ಎಪಿಎಂಸಿಯಿಂದ ಹೊರಗೆ ಮಾರಾಟ ಮಾಡಲು ಅವಕಾಶ ಕೊಡುವಂತೆ ಸೂಚನೆ ಕೊಟ್ಟಿರಲಿಲ್ಲ ಎಂದರು.
‘ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿ ಮಾರಾಟ ಮಾಡಬೇಕು ಎಂಬ ಆಯ್ಕೆ ಸಿಗುವಂತಾಗಬೇಕು’ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಮೊದಲ ವಾಕ್ಯದ ಬಗ್ಗೆಯೆ ನಮ್ಮ ವಾದ ಇರುವುದು ಎಂದು ಮಾಧುಸ್ವಾಮಿ ಹೇಳಿದರು.







