'ಭಾರತ್ ಬಂದ್' ಬೆನ್ನಲ್ಲೇ ಮತ್ತೊಂದು ಹೋರಾಟಕ್ಕೆ ರೈತ ಸಂಘಟನೆಗಳ ಕರೆ: ಬುಧವಾರ ವಿಧಾನಸೌಧಕ್ಕೆ ಮುತ್ತಿಗೆ
ತಗ್ಗದ ಅನ್ನದಾತರ ಆಕ್ರೋಶ

ಬೆಂಗಳೂರು, ಡಿ.8: ಕೇಂದ್ರ ಸರಕಾರದ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ನಡೆದ ಅಖಿಲ ಭಾರತ್ ಬಂದ್ ಬೆನ್ನಲ್ಲೇ ನಾಳೆ(ಡಿ.9) ಮತ್ತೊಂದು ಸುತ್ತಿನ ಹೋರಾಟಕ್ಕೆ ರೈತ ಪರ ಸಂಘಟನೆಗಳು ಕರೆ ನೀಡಿವೆ.
ಕೇಂದ್ರದ ರೈತ ವಿರೋಧಿ ಮಸೂದೆಗಳಿಗೆ ವಿರೋಧಿಸಿ ರಾಜ್ಯದಲ್ಲಿ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತಾರಕಕ್ಕೆ ಏರಲಿದ್ದು, ಬುಧವಾರ ರಾಜ್ಯದ ಶಕ್ತಿ ಸೌಧ ವಿಧಾನಸೌಧಕ್ಕೆ ಮುತ್ತಿಗೆ ಚಳುವಳಿಗೆ ರೈತ ಸಂಘಟನೆಗಳು ಕರೆ ನೀಡಿವೆ. ಮತ್ತೊಂದೆಡೆ ಕನ್ನಡಪರ ಸಂಘಟನೆಗಳು ರಾಜಭವನ ಮುತ್ತಿಗೆ ಹೋರಾಟಕ್ಕೂ ಮುಂದಾಗಿದ್ದು, ನಾಳೆ ಸಹ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಪ್ರತಿಭಟನೆಗಳ ಬಿಸಿ ತಟ್ಟಲಿದೆ.
ಈ ಕುರಿತಂತೆ ಮಾಹಿತಿ ನೀಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಡಿ.9ರಿಂದ ನಮ್ಮ ಹೋರಾಟ ಮತ್ತಷ್ಟು ಚುರುಕುಗೊಳಿಸಿ, ಸರಕಾರಕ್ಕೆ ಬುದ್ಧಿ ಕಲಿಸಲಾಗುವುದು. ಇನ್ನು, ಈ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯುವರೆಗೂ ಹಂತ ಹಂತವಾಗಿ ಹೋರಾಟ ಮುಂದುವರಿಸಿದ್ದು, ಇದರ ಭಾಗವಾಗಿ ವಿಧಾನಸೌಧ ಮುತ್ತಿಗೆ ಚಳುವಳಿ ನಡೆಸಲಾಗುತ್ತಿದೆ ಎಂದರು.
ಯಾವುದೇ ಕಾರಣಕ್ಕೂ ವಿಧಾನಸೌಧ ಮುತ್ತಿಗೆ ನಿರ್ಧಾರವನ್ನು ಹಿಂಪಡೆಯುವುದಿಲ್ಲ. ಈ ಪ್ರತಿಭಟನೆಯಲ್ಲಿ 10 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಈ ಮೂಲಕ ರೈತ ವಿರೋಧಿ ಮಸೂದೆಗಳ ವಿರುದ್ಧ ತೀವ್ರವಾಗಿ ಪ್ರತಿಭಟನೆ ನಡೆಸುವುದಾಗಿ ನುಡಿದರು.
ಕರವೇಯಿಂದ ರಾಜಭವನ ಮುತ್ತಿಗೆ: ಅನ್ನದಾತರ ಹೋರಾಟಕ್ಕೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಪ್ರತಿಭಟನೆಯನ್ನು ನಡೆಸಲಾಗುವುದು.
ಡಿ.9ರಂದು ಬೆಳಗ್ಗೆ 11 ಗಂಟೆಗೆ ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಜಮಾಯಿಸಲಿರುವ ಸಾವಿರಾರು ಕರವೇ ಕಾರ್ಯಕರ್ತರು, ಅಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿ, ರಾಜ್ಯಪಾಲರನ್ನು ಭೇಟಿ ಮಾಡಿ ರಾಷ್ಟ್ರಪತಿಗಳಿಗೆ ರೈತವಿರೋಧಿ ಮಸೂದೆ ವಾಪಾಸ್ ಗೆ ಒತ್ತಾಯಿಸಿ ಮನವಿ ಸಲ್ಲಿಸಲಿದ್ದೇವೆ. ಒಂದು ವೇಳೆ ಅವಕಾಶ ನೀಡದೆ ಇದ್ದಲ್ಲಿ, ಮುತ್ತಿಗೆ ಹಾಕುವುದಾಗಿ ನಾರಾಯಣಗೌಡ ತಿಳಿಸಿದರು.







