ಬೆಳ್ತಂಗಡಿ : ನದಿಯಲ್ಲಿ ಮುಳುಗಿ ವ್ಯಕ್ತಿ ಮೃತ್ಯು
ಬೆಳ್ತಂಗಡಿ : ಇಲ್ಲಿನ ಸೋಮಾವತಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೋರ್ವ ನದಿ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ಉಜಿರೆ ಗ್ರಾಮದ ಶಿವಾಜಿ ನಗರ ರೆಂಜಾಳ ನಿವಾಸಿ ರಮೇಶ್ (48) ಎಂದು ಗುರುತಿಸಲಾಗಿದೆ.
ಪ್ರಾರಂಭದಲ್ಲಿ ಬೆಳ್ತಂಗಡಿ ಸೋಮಾವತಿ ನದಿ ನೀರಿನಲ್ಲಿ ಪಂಪ್ ಹೌಸ್ ಬಳಿಯ ಗುಂಡಿಯಲ್ಲಿ ಇಬ್ಬರು ಮುಳುಗಿ ನಾಪತ್ತೆಯಾಗಿದ್ದಾರೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ಮತ್ತು ಸ್ಥಳೀಯ ಮುಳುಗು ಪರಿಣತರು ಹುಡುಕಾಟ ಆರಂಭಿಸಿದ್ದರು.
ನದಿ ತಟದಲ್ಲಿ ಮೊಬೈಲ್ ಫೋನ್ ಮತ್ತು ಮೀನು ಹಿಡಿಯುವ ಪರಿಕರಗಳು ಪತ್ತೆಯಾಗಿದ್ದರಿಂದ ನದಿ ನೀರಿನಲ್ಲಿ ಯಾರೋ ಮುಳುಗಿದ್ದಾರೆ ಎಂಬುದು ಬಹುತೇಕ ಖಚಿತಗೊಂಡಿತ್ತು.
ಈ ವೇಳೆಗೆ ರೆಂಜಾಳ ನಿವಾಸಿ ರಮೇಶ್ ಅವರ ಸಹೋದರ ಮಾಹಿತಿ ನೀಡಿ, ಸೋಮವಾರ ಸಂಜೆ ಮೀನು ಹಿಡಿಯಲು ಹೋಗಿದ್ದ ಅಣ್ಣನ ಮೊಬೈಲ್ ಫೋನ್ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸ್ವಿಚ್ಚ್ಡ್ ಆಫ್ ಬರುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿದ್ದರು. ಇದಾದ ಬಳಿಕ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ನಡೆಸಿದ ಕಾರ್ಯಾಚರಣೆ ವೇಳೆ ರಮೇಶ್ ಅವರ ಮೃತದೇಹ ಹೊಳೆಯ ನೀರಿನಲ್ಲಿ ಪತ್ತೆಯಾಗಿದೆ.
ಮೃತದೇಹದ ಮರಣೋತ್ತರ ಪರೀಕ್ಷೆ ಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿದೆ.ಸ್ಥಳಕ್ಕೆ ಬೆಳ್ತಂಗಡಿ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.