ಇಎಸ್‌ಐ ಚಿಕಿತ್ಸಾ ಸೌಲಭ್ಯ ಪುನಾರಂಭಿಸುವಂತೆ ಒತ್ತಾಯಿಸಿ ಧರಣಿ
ಉಡುಪಿ, ಡಿ.8: ಇಎಸ್‌ಐಸಿ ಪ್ರಾಧಿಕಾರವು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಬಾಕಿ ಇರಿಸಿರುವ 10ರಿಂದ 15 ಕೋಟಿ ರೂ. ಹಣವನ್ನು ಪಾವತಿಸಿ ಇಎಸ್‌ಐ ಚಿಕಿತ್ಸಾ ಸೌಲಭ್ಯವನ್ನು ಪುನಾರಂಭಿಸುವಂತೆ ಒತ್ತಾಯಿಸಿ ಮಾಸ್ ಇಂಡಿಯಾ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿ ಕಾರಿ ಕಚೇರಿ ಎದುರು ಧರಣಿ ನಡೆಸ ಲಾಯಿತು.
ಇದೇ ಸಂದರ್ಭದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಉಪವಾಸ ಸತ್ಯಾಗ್ರಹ ನಡೆಸಿದ ಮಾಸ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಗೋಪಾಲ ಕೋಟೆ ಯಾರ್ ಮಾತನಾಡಿ, ಇಎಸ್‌ಐ ಯೋಜನೆಯಲ್ಲಿ ಉಡುಪಿ, ಕುಂದಾಪುರ, ಮಣಿಪಾಲ ಹಾಗೂ ಕಾರ್ಕಳದಲ್ಲಿ ಕೇವಲ ಔಷಧಾಲಯಗಳಿದ್ದು, ಅಲ್ಲಿ ಎಲ ಸೌಲಭ್ಯಗಳನ್ನು ಒದಗಿಸ ಬೇಕು. ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು. ಎಲ್ಲ ರೀತಿಯ ಔಷದಿ ದೊರೆಯುವಂತೆ ಮಾಡಬೇಕು ಜಿಲ್ಲೆ ಯಲ್ಲಿ ಒಂದು ಇಎಸ್‌ಐ ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆಯನ್ನು ಗುರುತಿಸಿ, ಎಲ್ಲ ಸೌಲಭ್ಯವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಇಎಸ್‌ಐ ಮೆಡಿಕಲ್ ಸರ್ವಿಸ್‌ನ ಉಡುಪಿ ಮೆಡಿಕಲ್ ಉಸ್ತುವಾರಿ ಡಾ.ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾರ್ಮಿಕ ಅಧಿಕಾರಿ ಕುಮಾರ್ ಅವರ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸರಕಾರ ಶೀಘ್ರವೇ ಕೆಎಂಸಿಗೆ ಬಾಕಿ ಹಣವನ್ನು ಪಾವತಿಸಿ, ಚಿಕಿತ್ಸೆಯನ್ನು ಮತ್ತೆ ಆರಂಭಿಸಲಿದೆ ಎಂದು ಸದಾಶಿವ ಪ್ರಭು ಭರವಸೆ ನೀಡಿದರು.
ಧರಣಿಯಲ್ಲಿ ಮಾಸ್ ಇಂಡಿಯಾ ಯುವ ಘಟಕದ ರಾಜ್ಯಾಧ್ಯಕ್ಷ ವಿಶ್ವನಾಥ್, ಮಣಿಪಾಲ ಯುವ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸ್ಟೀಫನ್ ರಾಜೇಶ್ ಪಿರೇರಾ, ಪಿಆರ್‌ಓ ನರಸಿಂಹ ಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸುವರ್ಣ, ಅವಿನಾಶ್ ಕುಮಾರ್ ರಮೇಶ್ ಕುಮಾರ್ ಕಾರ್ಕಳ, ಪದ್ಮಿಣಿ ಕೊಡವೂರು ಉಪಸ್ಥಿತರಿದ್ದರು.







