Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಯುಪಿಸಿಎಲ್ ಯೋಜನೆಯಿಂದಾದ ಹಾನಿಗಳ ಸಮಗ್ರ...

ಯುಪಿಸಿಎಲ್ ಯೋಜನೆಯಿಂದಾದ ಹಾನಿಗಳ ಸಮಗ್ರ ಅಧ್ಯಯನ : ಕೊಳಚೂರು, ಉಳ್ಳೂರು ಪರಿಸರಕ್ಕೆ ಭೇಟಿ ನೀಡಿದ ತಜ್ಞರ ತಂಡ

ವಾರ್ತಾಭಾರತಿವಾರ್ತಾಭಾರತಿ8 Dec 2020 8:49 PM IST
share
ಯುಪಿಸಿಎಲ್ ಯೋಜನೆಯಿಂದಾದ ಹಾನಿಗಳ ಸಮಗ್ರ ಅಧ್ಯಯನ : ಕೊಳಚೂರು, ಉಳ್ಳೂರು ಪರಿಸರಕ್ಕೆ ಭೇಟಿ ನೀಡಿದ ತಜ್ಞರ ತಂಡ

ಪಡುಬಿದ್ರಿ/ಉಡುಪಿ, ಡಿ.8: ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿ ಸುತ್ತಿರುವ ಅದಾನಿ ಮಾಲಕತ್ವದ ಕಲ್ಲಿದ್ದಲು ಆಧಾರಿತ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯಿಂದ ಹಾನಿಗೊಳಗಾದ ಪರಿಸರದ ಹಲವು ಗ್ರಾಮಗಳಿಗೆ ಹೊಸದಿಲ್ಲಿಯ ಹಸಿರು ಪೀಠದ ನಿರ್ದೇಶನದಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ತಜ್ಞರ ತಂಡವೊಂದು ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ತಿರು ಮೂರ್ತಿ ನೇತೃತ್ವದಲ್ಲಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತಲ್ಲದೇ, ಸಂತ್ರಸ್ಥ ಜನರ ಅಹವಾಲುಗಳನ್ನು ಆಲಿಸಿತು.

ನಂದಿಕೂರು ಜನಜಾಗೃತಿ ಸಮಿತಿಯು ರಾಷ್ಟ್ರೀಯ ಹಸಿರು ಪೀಠದ ಮುಂದೆ 2018ರಲ್ಲಿ ದಾಖಲಿಸಿರುವ ಮೇಲ್ಮನವಿಯ ಹಿನ್ನೆಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯಿಂದಾಗಿ ಉಂಟಾಗಿರುವ ಪರಿಸರ ಹಾನಿಗಳ ಬಗ್ಗೆ ಮರು ಪರಿಶೀಲನೆ ನಡೆಸಲು ಈ ತಂಡ ಜಿಲ್ಲೆಗೆ ಆಗಮಿಸಿದೆ.

ಮೂವರು ಸದಸ್ಯರ ಈ ತಂಡ ಎಲ್ಲೂರು ಗ್ರಾಮದ ಉಳ್ಳೂರು, ಕೊಳಚೂರು, ಮುದರಂಗಡಿ ಭಾಗಗಳಿಗೆ ಭೇಟಿ ನೀಡಿ ಯೋಜನೆಯಿಂದ ಗ್ರಾಮಸ್ಥರಿಗೆ, ಕೃಷಿಗೆ, ತೋಟಗಾರಿಕಾ ಬೆಳೆಗಳಿಗೆ, ಸಾಕುಪ್ರಾಣಿಗಳಿಗೆ ಹಾಗೂ ಪರಿಸರದ ಜನರ ಆರೋಗ್ಯದ ಕುರಿತಂತೆ ಉಂಟಾದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ದಾಖಲಿಸಿಕೊಂಡಿತು.

ಬಳಿಕ ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ತೆರಳಿದ ತಂಡ, ಅಲ್ಲಿನ ವೈದ್ಯಾಧಿಕಾರಿಗಳೊಂದಿಗೆ ವಿವರವಾಗಿ ಮಾತುಕತೆ ನಡೆಸಿ ಮಾಹಿತಿ ಕಲೆ ಹಾಕಿತು. ಯೋಜನೆ ಆರಂಭಗೊಂಡ ಬಳಿಕ ಎಲ್ಲೂರು ಆಸುಪಾಸಿನ ಜನರಿಗೆ ಉಂಟಾಗಿರುವ ದೈಹಿಕ, ಮಾನಸಿಕ ಸಮಸ್ಯೆಗಳ ಕುರಿತು ವಿವರಗಳನ್ನು ಸಹ ಕಲೆ ಹಾಕಿತು.

ತಂಡ ಮೊದಲು ಭೇಟಿ ನೀಡಿದ್ದು ಉಳ್ಳೂರಿನ ಜಗನ್ನಾಥ ಮೂಲ್ಯ ಅವರ ಮನೆಗೆ. ಜಗನ್ನಾಥ ಮೂಲ್ಯ, ಯೋಜನೆಯಿಂದ ತನಗಾದ ತೊಂದರೆ ಗಳನ್ನು, ಬದುಕಿನ ಸ್ಥಿತ್ಯಂತರಗಳನ್ನು ಸಮಿತಿಯ ಮುಂದೆ ವಿವರವಾಗಿ ತೆರೆದಿಟ್ಟರು. ತನ್ನ ಆರೋಗ್ಯ, ವೃದ್ಧ ತಾಯಿಯನ್ನು ಸರಿಯಾದ ರಸ್ತೆ ಸೌಕರ್ಯವಿಲ್ಲದಿರುವುದರಿಂದ ಆಸ್ಪತ್ರೆಗೆ ಒಯ್ಯಲು ಪಡುತ್ತಿರುವ ಬವಣೆಯನ್ನು ವಿವರಿಸಿದರು.

ಕೃಷಿ ಬದುಕು ಸರ್ವನಾಶ: ಕೃಷಿಯನ್ನೇ ಬದುಕಿಗೆ ಆಧಾರವಾಗಿ ನೆಚ್ಚಿಕೊಂಡಿರುವ ತನ್ನ ಕುಟುಂಬ, ಕೃಷಿನಾಶ, ಬೆಳೆನಾಶದಿಂದ ಪಡುತ್ತಿರುವ ಸಂಕಷ್ಟವನ್ನು ಅವರು ಸಮಿತಿಯ ಮುಂದೆ ವಿವರಿಸಿದರು. ಭತ್ತ, ಅಡಿಕೆ, ಕಾಳುಮೆಣಸು, ತೆಂಗು ಬೆಳೆಯನ್ನು ಹಲವು ವರ್ಷಗಳಿಂದ ನಡೆಸುತ್ತಾ ಬಂದಿದ್ದೇನೆ. ಯೋಜನೆ ಕಾರ್ಯಾಚರಣೆಗೊಂಡ ಬಳಿಕ ಎಲ್ಲದರ ಇಳುವರಿ ತೀರಾ ಕಡಿಮೆಯಾಗಿದೆ ಎಂದವರು ತಂಡದೆದುರು ಸವಿಸ್ತಾರವಾಗಿ ನುಡಿದರು.

ಯೋಜನೆ ಆರಂಭಗೊಳ್ಳುವ ಮೊದಲು ವರ್ಷಕ್ಕೆ 9ರಿಂದ 10 ಕ್ವಿಂಟಾಲ್ ಕರಿಮೆಣಸು ಇಳುವರಿ ಸಿಗುತ್ತಿತ್ತು. ಈಗ 2ರಿಂದ 3ಕ್ವಿಂಟಾಲ್ ಮಾತ್ರ ಇಳುವರಿ ಯಾಗುತ್ತಿದೆ ಎಂದು ಜಗನ್ನಾಥ್ ಮೂಲ್ಯ ಹಾಳಾದ ಕರಿಮೆಣಸಿನ ಸ್ಯಾಂಪಲ್‌ನ್ನು ತಂಡದೆದುರು ಪ್ರದರ್ಶಿಸಿದರು. ಇನ್ನು ಎರಡರಿಂದ ಮೂರು ಸಾವಿರ ಕ್ವಿಂಟಾಲ್‌ವರೆಗೆ ಬರುತಿದ್ದ ಅಡಿಕೆ ಇಳುವರಿ ಈಗ 200ರಿಂದ 300ಕೆ.ಜಿ.ಗೆ ಇಳಿದಿದೆ ಎಂದರು.

ಎಲ್ಲೂರು ಗ್ರಾಮದ ಜಯಂತ್ ರಾವ್, ಗಣೇಶ್ ರಾವ್ ಅವರ ಮನೆ, ಪರಿಸರ, ಅಲ್ಲಿನ ಅಂತರ್ಜಲ ಮತ್ತು ಉಪ್ಪುನೀರಿನ ಸಮಸ್ಯೆ, ಕುಂಠಿತ ವಾಗಿರುವ ಕೃಷಿ ಹಾಗು ತೋಟಗಾರಿಕಾ ಇಳುವರಿ, ಗ್ರಾಮವನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗಳನ್ನು ತಂಡವು ಪರಿಶೀಲಿಸಿತು.

ಗಣೇಶ್ ರಾವ್ ಯೋಜನೆಯಿಂದ ಕೃಷಿ, ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳ ಮೇಲೂ ಪರಿಣಾಮ ಬೀರಿದೆ. ಜಾನುವಾರುಗಳಿಗೆ ಚರ್ಮ ರೋಗ ಕಾಣಿಸಿಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ 10 ಜಾನುವಾರುಗಳು ಸಾವನ್ನಪ್ಪಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗ ಜಾನುವಾರುಗಳನ್ನು ಸಾಕುವುದನ್ನೇ ಕೈಬಿಟ್ಟಿದ್ದಾರೆ ಎಂದವರು ಹೇಳಿದರು.

ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ತೆರಳಿದ ತಂಡ, 2007ರ ಬಳಿಕ ಜನತೆಯ ಆರೋಗ್ಯ ಮೇಲಾಗಿರುವ ಹಾನಿಯ ಮಟ್ಟವನ್ನು ಅಂಕಿ ಅಂಶ ಗಳ ಸಹಿತವಾಗಿ ದಾಖಲಿಸಿಕೊಂಡಿತು. ಎಲ್ಲೂರು ಭಂಡಾರಮನೆ ಮಾಧವ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ಯೋಜನೆಯಿಂದ ಸುಮಾರು 10 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಗಳಾಗಿವೆ. ಇದರಿಂದ ಜನಜೀವನ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಸಮಿತಿಯ ಮುಂದೆ ವಿವರಿಸಿದರು.

ಜನವರಿ ಅಂತ್ಯದೊಳಗೆ ವರದಿ: ಸಮಿತಿಯ ಕಾರ್ಯವಿಧಾನದ ಕುರಿತು ವಿವರಿಸಿದ ತಜ್ಞರ ಸಮಿತಿಯ ಸದಸ್ಯ ಡಾ.ಕೃಷ್ಣರಾಜ್, ಯೋಜನೆ ಯಿಂದ ಪರಿಸರ ಹಾನಿಗೊಳಗಾದವರಿಗೆ ಪರಿಹಾರ ಧನ ನಿಗದಿಪಡಿಸಲು ಈ ತಂಡವು ರೈತರ ಭೂಮಿಗಳಿಗೆ ತೆರಳುತ್ತಿದೆ. ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ತೊಂದರೆಗಳನ್ನು ತಂಡವು ಈಗಾಗಲೇ ಕಲೆ ಹಾಕಿದೆ. ಪರಿಸರ, ಆರೋಗ್ಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ. ಕೇಂದ್ರೀಯ ಹಸಿರು ಪೀಠಕ್ಕೆ ತಜ್ಞರ ಸಮಿತಿಯು ಮುಂದಿನ ಜ. 31ರೊಳಗಾಗಿ ವರದಿ ಯನ್ನು ನೀಡಬೇಕಾಗಿದೆ. ಆದರೆ ಮತ್ತಷ್ಟು ಅಂಕಿಅಂಶಗಳ ಕ್ರೋಢೀಕರಣ ಆಗಬೇಕಿರುವುದರಿಂದ ಈ ದಿನಾಂಕ ಒಂದಷ್ಟು ದಿನ ಮುಂದೂಡಲ್ಪಡಬಹುದು ಎಂದು ಡಾ.ಕೃಷ್ಣರಾಜ್ ಹೇಳಿದರು.

ಪರಿಸರ ಕಾನೂನುಗಳ ಉಲ್ಲಂಘನೆಗಾಗಿ ಸುಮಾರು 5ಕೋಟಿ ರೂ. ಗಳ ಪರಿಹಾರವನ್ನು ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಗೆ ಯುಪಿಸಿಎಲ್ ದಂಡ ಪಾವತಿಸಿದೆ. ಸದ್ಯ ಜನತೆಗೆ ಯೋಜನೆಯಿಂದ ಆಗಿರಬಹುದಾದ ಸುಮಾರು 177.8 ಕೋಟಿ ರೂ. ನಷ್ಟ ಪಾವತಿಗಾಗಿ ನಂದಿಕೂರು ಜನಜಾಗೃತಿ ಸಮಿತಿಯ ದಾವೆಯಲ್ಲಿ ಅಂತಿಮ ಆದೇಶವೂ ನಂದಿಕೂರು ಜನ ಜಾಗೃತಿ ಸಮಿತಿ ಪರವಾಗಿಯೇ ಬಂದಿದೆ. ಅದಕ್ಕಾಗಿ ಈ ಸಮಿತಿಯು ಪರಿಶೀಲಿಸಿ ವರದಿಯನ್ನು ನೀಡಲಿದೆ ಎಂದು ಡಾ. ಕೃಷ್ಣರಾಜ್ ವಿವರಿಸಿದರು.

ಬೆಂಗಳೂರು ಕಚೇರಿಯ ಜಂಟಿ ನಿರ್ದೇಶಕ ತಿರುಮೂರ್ತಿ, ಬೆಂಗಳೂರಿನ ಫ್ರೊ. ಡಾ. ಶ್ರೀಕಾಂತ್ ಹಾಗೂ ಐಎಸ್‌ಇಸಿ ಬೆಂಗಳೂರಿನ ಡಾ. ಕೃಷ್ಣರಾಜ್ ತಜ್ಞರ ತಂಡದಲ್ಲಿದ್ದರು.

ಈ ಕೇಂದ್ರಿಯ ಸಮಿತಿಯೊಂದಿಗೆ ಕೃಷಿ ಇಲಾಖಾ ಜಂಟಿ ನಿರ್ದೇಶಕ ಕೆಂಪೇಗೌಡ, ಉಪ ನಿರ್ದೇಶಕ ಚಂದ್ರಶೇಖರ ನಾಯಕ್, ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್, ಸಹಾಯಕ ಕೃಷಿ ಅಧಿಕಾರಿಗಳಾದ ವಾದಿರಾಜ ರಾವ್, ಶೇಖರ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯ ಡಾ. ದಿವ್ಯಾ, ಮಂಗಳೂರು ಪರಿಸರ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ರಮೇಶ್, ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಬ್ರಹ್ಮಣ್ಯ ಪ್ರಭು, ಸ್ಥಳೀಯರಾದ ಮಾಧವ ಶೆಟ್ಟಿ, ಹರೀಶ್ ಶೆಟ್ಟಿ, ಜಗನ್ನಾಥ ಮೂಲ್ಯ, ಜಯಂತ್ ರಾವ್, ನಾಗೇಶ್ ರಾವ್, ಗಣೇಶ್ ರಾವ್, ಸುಬ್ರಹ್ಮಣ್ಯ ರಾವ್ ಇದ್ದರು.

56 ಲಕ್ಷ ರೂ. ತೆರಿಗೆ ಪಾವತಿಸಿದ ಯುಪಿಸಿಎಲ್ 

ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಸ್ಥಾವರ, ಈ ಹಿಂದೆ ತಪ್ಪು ಮಾಹಿತಿಗಳನ್ನು ನೀಡಿ, ಗ್ರಾಪಂನ ಕೆಲವರನ್ನು ಬುಟ್ಟಿಗೆ ಹಾಕಿಕೊಂಡು ವಾರ್ಷಿಕ ಕೇವಲ 10 ಲಕ್ಷ ರೂ.ತೆರಿಗೆ ಪಾವತಿಸುತ್ತಿತ್ತು. ಆದರೆ ತಾನು ಗ್ರಾಪಂನ ಸದಸ್ಯನಾಗಿ ಆಯ್ಕೆಯಾಗಿ ಉಪಾಧ್ಯಕ್ಷನಾದ ಮೇಲೆ ಅವರಿಗೆ ನೋಟೀಸು ನೀಡುವ ಎಚ್ಚರಿಕೆ ನೀಡಿ 56 ಲಕ್ಷ ರೂ.ತೆರಿಗೆ ಪಾವತಿಸುವಂತೆ ಮಾಡಿದ್ದೇನೆ ಎಂದು ನಂದಿಕೂರು ಜನಜಾಗೃತಿ ಸಮಿತಿಯ ಉಪಾದ್ಯಕ್ಷರೂ, ಎಲ್ಲೂರು ಗ್ರಾಪಂನ ಉಪಾಧ್ಯಕ್ಷರೂ ಆಗಿರುವ ಜಯಂತ ಭಟ್ ಸಮಿತಿಗೆ ತಿಳಿಸಿದರು.

ಅಧಿಕೃತವಾದ ಯಾವೊಂದು ದಾಖಲೆಗಳು, ಪರವಾನಿಗೆಗಳು ಇಲ್ಲದೇ ಈ ಯೋಜನೆ ಆರಂಭಗೊಂಡು, ನಡೆಯುತ್ತಿದೆ. ಈ ಬಗ್ಗೆ ಸಮಿತಿ ಈಗಾಗಲೇ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ. ಇದು ನಡೆಯುತ್ತಿರುವುದೇ ಅಕ್ರಮಗಳ ಮೂಲಕ ಪಡೆದ ಪರವಾನಿಗೆಯಿಂದ ಬಹಳಷ್ಟು ಮಾಹಿತಿಗಳನ್ನು ತಂಡದೊಂದಿಗೆ ಹಂಚಿಕೊಂಡರು.

ಯೋಜನೆಯಿಂದ ಎಲ್ಲೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರವಾಗಿದ್ದು, ಇದೀಗ ಅವರಿಂದಲೇ ವಾರ್ಷಿಕ 2.30 ಲಕ್ಷ ರೂ. ಪಡೆದು 72 ಮನೆಗಳಿಗೆ ಉಚಿತ ನೀರು, ಅದಕ್ಕೆ ವಿದ್ಯುತ್ ಬಿಲ್, ಒಬ್ಬ ಕೆಲಸದವನಿಗೆ ತಿಂಗಳ ಸಂಬಳವನ್ನು ಭರಿಸುವಂತೆ ಮಾಡಲಾಗಿೆ ಎಂದು ಜಯಂತ್ ಭಟ್ ವಿವರಿಸಿದರು.

ತಜ್ಞರ ಸಮಿತಿ ಭೇಟಿ ನೀಡುವ ಕಾರಣಕ್ಕಾಗಿ ಸ್ಥಾವರ ಕಳೆದ ನಾಲ್ಕು ದಿನಗಳಿಂದ ಮುಚ್ಚಿತ್ತು. ಇಂದು ಬೆಳಗಿನಿಂದ ಅದು ಮತ್ತೆ ಚಾಲೂ ಆಗಿದೆ ಎಂದು ಜಯಂತ ಭಟ್ ತಿಳಿಸಿದರು. ಅಪರಾಹ್ನದ ಬಳಿಕ ಸಮಿತಿ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X