ಬ್ರಿಟನ್: ಫೈಝರ್ ಲಸಿಕೆ ನೀಡುವ ಅಭಿಯಾನ ಆರಂಭ
90 ವರ್ಷದ ಮಹಿಳೆ ಮೊದಲ ವ್ಯಕ್ತಿ

ಲಂಡನ್, ಡಿ. 8: ತನ್ನ ಜನರಿಗೆ ಕೊರೋನ ವೈರಸ್ ಲಸಿಕೆ ನೀಡುವ ಅಭಿಯಾನವನ್ನು ಬ್ರಿಟನ್ ಮಂಗಳವಾರ ಆರಂಭಿಸಿದ್ದು, ನಾರ್ದರ್ನ್ ಐರ್‌ಲ್ಯಾಂಡ್‌ನ 90 ವರ್ಷದ ಮಹಿಳೆಯೊಬ್ಬರು ಫೈಝರ್‌ನ, ಪ್ರಯೋಗಕ್ಕೆ ಹೊರತಾದ ಲಸಿಕೆ ಪಡೆದ ಜಗತ್ತಿನ ಮೊದಲ ವ್ಯಕ್ತಿಯಾಗಿದ್ದಾರೆ.
ಮಾರ್ಗರೆಟ್ ಕೀನನ್ ಮಧ್ಯ ಇಂಗ್ಲೆಂಡ್‌ನ ಕಾವೆಂಟ್ರಿಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಂಗಳವಾರ ಬೆಳಗ್ಗೆ ಫೈಝರ್-ಬಯೋಎನ್‌ಟೆಕ್ ಲಸಿಕೆಯನ್ನು ಪಡೆದರು. ಮುಂದಿನ ವಾರ ಅವರು 91ನೇ ವರ್ಷಕ್ಕೆ ಕಾಲಿರಿಸಲಿದ್ದಾರೆ.
ಬ್ರಿಟನ್ ತನ್ನ ಜನರಿಗೆ ಕೊರೋನ ವೈರಸ್ ನಿರೋಧಕ ಲಸಿಕೆಯನ್ನು ನೀಡಿದ ಮೊದಲ ಪಾಶ್ಚಾತ್ಯ ದೇಶವಾಗಿದೆ.
ಬ್ರಿಟನ್ ಕೊರೋನ ವೈರಸ್‌ನಿಂದ ಅತಿ ಹೆಚ್ಚು ಹಾನಿಗೊಳಗಾದ ಐರೋಪ್ಯ ದೇಶವಾಗಿದೆ. ಅಲ್ಲಿ ಈವರೆಗೆ 61,000ಕ್ಕೂ ಅಧಿಕ ಮಂದಿ ರೋಗಕ್ಕೆ ಬಲಿಯಾಗಿದ್ದಾರೆ.
Next Story





