ಪ್ರತ್ಯೇಕ ಲಿಂಗಾಯತ ಧರ್ಮ ಹೊರಾಟಕ್ಕೆ ಮತ್ತೆ ಚಾಲನೆ: ಡಾ.ಮಲ್ಲಿಕಾರ್ಜುನ ಸ್ವಾಮೀಜಿ
''ವೀರಶೈವ-ಲಿಂಗಾಯತ ನಿಗಮದಿಂದ ಲಾಭವಿಲ್ಲ''

ಬೆಳಗಾವಿ, ಡಿ.8: ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದಿಂದ ಸಮಾಜಕ್ಕೆ ಯಾವುದೇ ರೀತಿಯ ಲಾಭ ಆಗುವುದಿಲ್ಲ ಆದುದರಿಂದ, ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ತಾತ್ಕಾಲಿಕವಾಗಿ ವೇಗ ಕಡಿಮೆಯಾಗಿದೆ ಅದಕ್ಕೆ ಮತ್ತೆ ಚಾಲನೆ ನೀಡಲಾಗುವುದು ಎಂದು ಶಿವಮೊಗ್ಗ ಆನಂದಪುರಂ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿರುವ ನಾಗನೂರು ರುದ್ರಾಕ್ಷಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕಾರಣಗಳಿಂದಾಗಿ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಹಿನ್ನಡೆಯಾಗಿದ್ದು ನಿಜ. ಈ ಬೆಳವಣಿಗೆ ಸರಿಯಲ್ಲ. ಸಮಾಜದ ಎಲ್ಲರೂ ಒಗ್ಗಟ್ಟಾಗಿ ಹೋಗುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ತಾವು ಪ್ರಯತ್ನ ಮಾಡುವುದಾಗಿ ಹೇಳಿದರು.
ತಾವು ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ನಾಡಿನ ಎಲ್ಲ ಗುರು ಮಠಗಳು ಮತ್ತು ವಿರಕ್ತ ಮಠಗಳ ಮಠಾಧೀಶರೊಂದಿಗೆ ಚರ್ಚೆ ನಡೆಸಲಾಗುವುದು. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಹಿನ್ನಡೆ ಆಯಿತು ಎಂದು ಪಂಚಮಸಾಲಿ ಪೀಠದ ಸ್ವಾಮೀಜಿ ಭಾವಿಸಿಕೊಂಡಿರಬಹುದು. ಹೀಗಾಗಿ ಅವರು ಬೇರೆಯೇ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಅದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಾವೆಲ್ಲ ಸಮಾಜದ ಎಲ್ಲ ವರ್ಗದವರು ಎಲ್ಲ ಗುರು-ವಿರಕ್ತರು ಸೇರಿ ಹೋರಾಟ ಮಾಡಿದರೆ ಮಾತ್ರ ಸಮಾಜದ ಉನ್ನತಿ ಸಾಧ್ಯ. ಸಮಾಜಕ್ಕೆ ಸಕಲ ಸವಲತ್ತುಗಳು ಸಿಗುವುದಕ್ಕೆ ಸಾಧ್ಯ, ಎಲ್ಲ ರೀತಿಯ ಮೀಸಲಾತಿ ಸೌಲಭ್ಯಗಳು ಸಿಗುವುದಕ್ಕೆ ಸಾಧ್ಯ. ಇದನ್ನು ಪಂಚಮಸಾಲಿ ಪೀಠದ ಸ್ವಾಮೀಜಿ ಅರ್ಥ ಮಾಡಿಕೊಳ್ಳಬೇಕು ಒಗ್ಗಟ್ಟಾಗಿ ಹೋದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮಲ್ಲಿಕಾರ್ಜುನ ಸ್ವಾಮಿ ಹೇಳೀದರು.
ಲಿಂಗಾಯತ ಧರ್ಮವು ತನ್ನದೇ ಆದ ಪ್ರತ್ಯೇಕ ತತ್ವಜ್ಞಾನ, ಪ್ರತ್ಯೇಕ ಆಚರಣೆ, ಪ್ರತ್ಯೇಕ ವಿಧಿವಿಧಾನ, ವಿಶಿಷ್ಟ ಪರಂಪರೆ, ವಿಶಿಷ್ಟ ಆಚರಣೆ ಅಳವಡಿಸಿಕೊಂಡಿದೆ. ಹೀಗಾಗಿ 80 ವರ್ಷದ ಹಿಂದೆ ಈ ಸಮಾಜದ ಅಂದಿನ ಹಿರಿಯರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ಕೇಳಿದ್ದರು ಎಂದು ಅವರು ನುಡಿದರು.
ಕರ್ನಾಟಕದಲ್ಲಿ ನಮ್ಮ ಸಮಾಜದ ಜನಸಂಖ್ಯೆ ಸ್ವಲ್ಪ ಹೆಚ್ಚಾಗಿದ್ದರೂ ಸಹ ಭಾರತದಾದ್ಯಂತ ಇರುವ ಜನಸಂಖ್ಯೆಗೆ ಹೋಲಿಸಿದಾಗ ನಮ್ಮ ಸಮಾಜದ ಜನಸಂಖ್ಯೆ ಅತ್ಯಲ್ಪ. ಹೀಗಾಗಿ ನಮ್ಮ ಸಮಾಜಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ಸಿಗಲೇಬೇಕು ಮತ್ತು ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನದ ಅಡಿಯಲ್ಲಿಯೇ ನಮಗೆ ಎಲ್ಲ ಸವಲತ್ತುಗಳು ಸಿಗುವಂತಾಗಬೇಕು. ಆದುದರಿಂದ, ಸಮಾಜದ ಎಲ್ಲ ಪಂಗಡಗಳ, ಎಲ್ಲ ವರ್ಗಗಳ ಹಿರಿಯರು ಮತ್ತು ಮಠಾಧೀಶರುಗಳು ಒಗ್ಗಟ್ಟಾಗಿ ಈ ಹೋರಾಟಕ್ಕೆ ಬೆಂಬಲಿಸಬೇಕಾಗಿದೆ ಎಂದು ಅವರು ಹೇಳಿದರು.







