2021ರ ಅಂತ್ಯದಲ್ಲಿ ಭಾರತದಲ್ಲಿ ಜಿಯೊ 5ಜಿ ಸೇವೆಗೆ ಚಾಲನೆ: ಅಂಬಾನಿ

ಹೊಸದಿಲ್ಲಿ, ಡಿ.8: ಭಾರತದಲ್ಲಿ ಜಿಯೊ 5ಜಿ ಸೇವೆಗೆ ಚಾಲನೆ ನೀಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.
ಮಂಗಳವಾರ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2020ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಯೋ ನೀಡುವ 5ಜಿ ಸೇವೆ ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿದೆ ಎಂದರು. ಜಿಯೊ 5ಜಿ ಸೇವೆಯ ಜೊತೆಗೆ, ದೇಶದಲ್ಲಿ ಕೈಗೆಟಕುವ ದರದಲ್ಲಿ ಆಂಡ್ರಾಯ್ಡ್ ಫೋನ್‌ಗಳನ್ನು ಗೂಗಲ್ ಸಹಾಯದೊಂದಿಗೆ ಅಭಿವೃದ್ದಿ ಪಡಿಸುತ್ತಿದ್ದು ಇದು ಮುಂದಿನ ದಿನಗಳಲ್ಲಿ ಜನತೆಗೆ ಲಭ್ಯವಾಗಲಿದೆ ಎಂದು ಅಂಬಾನಿ ಹೇಳಿದರು.
ದೇಶದಾದ್ಯಂತದ 300 ಮಿಲಿಯನ್ ಬಡ ಜನತೆಗೆ ಆಧುನಿಕ ತಲೆಮಾರಿನ ಸಂಪರ್ಕ ಸಾಧನಗಳನ್ನು ಒದಗಿಸಲು ನೆರವಾಗುವ ಪ್ರಮುಖ ಕಾರ್ಯನೀತಿ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಳ್ಳುವ ಅಗತ್ಯವಿದೆ. ಇದೇ ರೀತಿಯ ಕಾರ್ಯನೀತಿ ಕ್ರಮಗಳು ದೇಶದಲ್ಲಿ ಮುಂದಿನ ತಲೆಮಾರಿನ 5ಜಿ ಸೇವೆಯ ವ್ಯವಸ್ಥಿತ ನಿಯೋಜನೆಗೆ ಸಹಕಾರಿಯಾಗುತ್ತದೆ ಎಂದ ಅವರು, ಭಾರತವು ಸೆಮಿಕಂಡಕ್ಟರ್‌ಗಳ ಉತ್ಪಾದನೆಯ ಕೇಂದ್ರಸ್ಥಳವಾಗುವ ಎಲ್ಲಾ ಸಾಮರ್ಥ್ಯ ಮತ್ತು ಅವಕಾಶವನ್ನು ಹೊಂದಿದೆ . ಇದು ಭಾರತವನ್ನು ಸಮಗ್ರ ಉತ್ಪಾದನಾ ಕೇಂದ್ರವಾಗಿಸುವುದರ ಜೊತೆಗೆ ವಿಶ್ವದಾದ್ಯಂತದ ಬೃಹತ್ ತಂತ್ರಜ್ಞಾನ ಸಂಸ್ಥೆಗಳ ಮಾಲಕರಿಂದ ಹೆಚ್ಚಿನ ಹೂಡಿಕೆಯನ್ನೂ ಆಕರ್ಷಿಸಲಿದೆ ಎಂದರು.
ವಿಶ್ವದಲ್ಲಿ ಅತ್ಯುತ್ತಮ ಡಿಜಿಟಲ್ ಸಂಪರ್ಕ ವ್ಯವಸ್ಥೆ ಹೊಂದಿದ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಹಿರಿಮೆಯನ್ನು ಉಳಿಸಿಕೊಳ್ಳಲು 5ಜಿ ಸೇವೆಯ ಕ್ಷಿಪ್ರ ಮತ್ತು ಸಮರ್ಪಕ ನಿಯೋಜನೆಗೆ ಕಾರ್ಯನೀತಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.







