3,320 ಕೋಟಿ ರೂ.ಗಳ ಪೂರಕ ಅಂದಾಜುಗಳ 2ನೇ ಕಂತು ಮಂಡನೆ

ಬೆಂಗಳೂರು, ಡಿ. 8: ಮಾರಕ ಕೊರೋನ ಸೋಂಕಿನ ನಿಯಂತ್ರಣಕ್ಕೆ 900 ಕೋಟಿ ರೂ., ಆಂಧ್ರಪ್ರದೇಶದ ತಿರುಪತಿ ತಿರುಮಲದಲ್ಲಿ ರಾಜ್ಯದ ವಸತಿ ಗೃಹ ನಿರ್ಮಾಣಕ್ಕೆ 100 ಕೋಟಿ ರೂ., ಪ್ರವಾಹ ನಿರ್ವಹಣೆಗೆ 74 ಕೋಟಿ ರೂ. ಒಳಗೊಂಡಂತೆ ಒಟ್ಟು 3,320.40 ಕೋಟಿ ರೂ.ಮೊತ್ತದ ಪೂರಕ ಅಂದಾಜುಗಳು 2020-21ನೇ ಸಾಲಿನ ಎರಡನೇ ಕಂತನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಮಂಗಳವಾರ ವಿಧಾನಸಭೆಯ ವಿತ್ತಿಯ ಕಾರ್ಯಕಲಾಪದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪರವಾಗಿ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಪೂರಕ ಅಂದಾಜು ಮಂಡನೆ ಮಾಡಿ ಸದನದ ಒಪ್ಪಿಗೆಯನ್ನು ಕೋರಿದರು.
ಒಟ್ಟು 3,320.40 ಕೋಟಿ ರೂ.ಗಳ ಪೈಕಿ 291.57 ಕೋಟಿ ರೂ. ಪ್ರಭೃತ ವೆಚ್ಚ ಮತ್ತು 3,28.83 ಕೋಟಿ ರೂ.ಪುರಸ್ಕೃತ ವೆಚ್ಚ ಸೇರಿದೆ. 346.22 ಕೋಟಿ ರೂ.ಗಳು ಕೇಂದ್ರ ಸರಕಾರದ ಸಹಾಯಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಹೊರಹೋಗುವ ನಿವ್ವಳ ನಗದು ಮೊತ್ತ 2,838.06 ಕೋಟಿ ರೂಪಾಯಿಗಳಾಗಿವೆ ಎಂದು ಪೂರಕ ಅಂದಾಜಿನಲ್ಲಿ ಉಲ್ಲೇಖಿಸಲಾಗಿದೆ.
ಕೊರೋನ ನಿಯಂತ್ರಣಕ್ಕೆ ಆಹಾರ ಇಲಾಖೆ 711.62 ಕೋಟಿ ರೂ.ವೆಚ್ಚ ಮಾಡಿದ್ದು, ಆರೋಗ್ಯ ಇಲಾಖೆಯು 205.40 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಆರೋಗ್ಯ ಇಲಾಖೆ ತುರ್ತು ಔಷಧಿ, ಆರ್‍ಟಿಪಿಸಿಆರ್ ಕಿಟ್ಸ್ ಖರೀದಿಗೆ 170.72 ಕೋಟಿ ರೂ.ಮತ್ತು ವೆಂಟಿಲೇಟರ್, ಪಲ್ಸ್ ಆಕ್ಸಿಮೀಟರ್ ಖರೀದಿಗೆ 34.68 ಕೋಟಿ ರೂ.ಸೇರಿ ಕೋವಿಡ್-19 ನಿಯಂತ್ರಣಕ್ಕೆ ಒಟ್ಟು 900 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗಿದೆ.
ತುಮಕೂರು ಜಿಲ್ಲೆಯ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣಾ ವೆಚ್ಚಕ್ಕಾಗಿ 4ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅಲ್ಲದೆ, 3.05 ಕೋಟಿ ರೂ.ಸಾದಿಲ್ವಾರು ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ನಿಗಮ-ಮಂಡಳಿಗಳಿಂದ ನಿಯೋಜನೆ ಮೇಲೆ ವಿಧಾನಸಭೆ-ಪರಿಷತ್‍ನ ಸದಸ್ಯರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವೇತನ-ಭತ್ತೆ ಪಾವತಿಗಾಗಿ 64 ಲಕ್ಷ ರೂ.ಗಳನ್ನು ಪೂರಕ ಅಂದಾಜುನಲ್ಲಿ ಒದಗಿಸಲಾಗಿದೆ.







