ಸಾಲುಮರದ ತಿಮ್ಮಕ್ಕರ ಉಪಸ್ಥಿತಿಯಲ್ಲಿ ಅವರು ನೆಟ್ಟಿದ್ದ ಮರಗಳ ಎಣಿಕೆ ಕಾರ್ಯ

ಬೆಂಗಳೂರು, ಡಿ.8: ಸಾಲುಮರದ ತಿಮ್ಮಕ್ಕರ ಉಪಸ್ಥಿತಿಯಲ್ಲಿ ಅವರು ನೆಟ್ಟಿದ್ದ ಮರಗಳ ಎಣಿಕೆ ಕಾರ್ಯ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ತಾವು ನೆಟ್ಟು ಬೆಳೆಸಿದ ಮರಗಳನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ಅಗಲೀಕರಣದ ನೆಪದಲ್ಲಿ ಉರುಳಿಸಿದ್ದಾರೆ ಎಂದು ಸಾಲು ಮರದ ತಿಮ್ಮಕ್ಕ ಆರೋಪಿಸಿದ್ದರು. ತಿಮ್ಮಕ್ಕ ನೆಟ್ಟು, ಬೆಳೆಸಿದ್ದ ಸಾಲು ಮರಗಳ ಬುಡವನ್ನು ರಸ್ತೆ ನಿರ್ಮಾಣಕ್ಕಾಗಿ ಅಗೆಯಲಾಗಿದೆ ಎಂದು ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು.
ಕುದೂರು ಮತ್ತು ಹುಲಿಕಲ್ ರಸ್ತೆಯ ಎರಡೂ ಬದಿಗಳಲ್ಲಿ ತಿಮ್ಮಕ್ಕ ನೆಟ್ಟು ಬೆಳೆಸಿದ ಮರಗಳು ಬೆಳೆದಿವೆ. ಇಲ್ಲಿ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ನಡೆಸಿದವರು ಮರಗಳ ಬುಡವನ್ನು ಅಗೆದು ಮಣ್ಣು ತೆಗೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ರಸ್ತೆ ಕಾಮಗಾರಿಯಲ್ಲಿ ಮರಗಳಿಗೆ ಅಪಾಯ ಉಂಟಾಗಬಹುದು ಎಂಬ ಆತಂಕದ ನಡುವೆ ಸರಕಾರ ಕೂಡ ಮರಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವಂತೆ ಆದೇಶ ನೀಡಿತ್ತು. ಆದರೆ, ಅನೇಕ ಮರಗಳ ಬುಡಗಳಿಂದ ಮಣ್ಣು ತೆಗೆಯಲಾಗಿದೆ. ಇದರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗೆ ದೂರು ನೀಡುವುದಾಗಿ ತಿಮ್ಮಕ್ಕ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಸ್ತುತ ಲೋಕೋಪಯೋಗಿ ಇಲಾಖೆಯ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ತಿಮ್ಮಕ್ಕ ಉಪಸ್ಥಿತಿಯಲ್ಲಿಯೇ, ಅವರು ನೆಟ್ಟು, ಬೆಳೆಸಿದ್ದ ಮರಗಳ ಎಣಿಕೆ ಕಾರ್ಯ ನಡೆಸಲು ತೀರ್ಮಾನಿಸಿದ್ದಾರೆ. ಅಂತೆಯೇ ಈಗಾಗಲೇ ಬುಡದಿಂದ ಮಣ್ಣು ತೆಗೆಯಲಾಗಿರುವ ಮರಗಳ ಬುಡಕ್ಕೆ ಮತ್ತೆ ಮಣ್ಣು ಹಾಕಿಸಲಾಗಿದೆ.
ತಿಮ್ಮಕ್ಕ ಅವರು 1950 ಮತ್ತು 1970 ರ ಅವಧಿಯಲ್ಲಿ ಹುಲಿಕಲ್-ಕುದೂರು ಹೆದ್ದಾರಿಯಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ಸುಮಾರು 385 ಮರಗಳನ್ನು ನೆಟ್ಟಿ ಬೆಳೆಸಿದ್ದರು. ಇದೇ ಮರಗಳನ್ನು ಪರಂಪರೆಯ ಮರಗಳೆಂದು ಘೋಷಿಸಲು ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಜೀವವೈವಿಧ್ಯ ಮಂಡಳಿಗಳು ಮುಂದಾಗಿವೆ. ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಈ ಮರಗಳನ್ನು ಕಡಿದಿದೆ ಎಂದು ಆರೋಪಿಸಲಾಗಿದೆ.







