ಗರ್ಭಿಣಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ, ಪತಿ- ಮಾವ ಬಂಧನ

ಮೈಸೂರು,ಡಿ.8: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೋರ್ವರು ನೇಣಿಗೆ ಶರಣಾದ ಘಟನೆ ದಟ್ಟಗಳ್ಳಿಯಲ್ಲಿ ನಡೆದಿದ್ದು, ಪತಿ ಹಾಗೂ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.
ದಟ್ಟಗಳ್ಳಿ ನಿವಾಸಿ ನಿವೇದಿತಾ(19) ಎಂಬವರೇ ಆತ್ಮಹತ್ಯೆಗೆ ಶರಣಾದವರು. ಇವರ ಪತಿ ಧನರಾಜ್ ಮತ್ತು ಮಾವ ಲಕ್ಕಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ನಿವೇದಿತಾ ತಂದೆ- ತಾಯಿಯನ್ನು ಕಳೆದುಕೊಂಡಿದ್ದು 6 ತಿಂಗಳ ಹಿಂದಷ್ಟೇ ಧನರಾಜ್ ಎಂಬವನನ್ನು ವಿವಾಹವಾಗಿದ್ದರು. ಜ್ಯೋತಿಷಿ ವೃತ್ತಿ ಮಾಡುತ್ತಿದ್ದ ಧನರಾಜ್ ಗೆ ಮದುವೆ ಸಂದರ್ಭದಲ್ಲಿ ಚಿನ್ನಾಭರಣಗಳನ್ನು ನೀಡಲಾಗಿತ್ತು. ಆದರೆ ಇನ್ನಷ್ಟು ಚಿನ್ನಾಭರಣ ಬೇಕೆಂದು ಈತ ಕಿರುಕುಳ ನೀಡುತ್ತಿದ್ದ. ಇದರಿಂದ ನೊಂದ 2 ತಿಂಗಳ ಗರ್ಭಿಣಿ ನಿವೇದಿತಾ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.
ನಿವೇದಿತಾ ಸೋದರ ಸಂಬಂಧಿ ದೂರು ನೀಡಿದ್ದು ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





