ಪ್ರಾಣ ರಕ್ಷಣೆಯ ಸಾಹಸ ಮತ್ತೊಂದು ಪ್ರಾಣಕ್ಕೆ ಕುತ್ತಾಗದಿರಲಿ

ಮಾನ್ಯರೇ,
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೊಬ್ಬಳನ್ನು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ‘ಝೀರೋ ಟ್ರಾಫಿಕ್’ನಲ್ಲಿ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು. ಕಡಿಮೆ ಸಮಯದಲ್ಲಿ ಪುತ್ತೂರಿನಿಂದ ಬೆಂಗಳೂರಿಗೆ ಆ್ಯಂಬುಲೆನ್ಸ್ ತಲುಪಿದ್ದು, ಆ್ಯಂಬುಲೆನ್ಸ್ ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು ಮತ್ತು ಝೀರೋ ಟ್ರಾಫಿಕ್‌ಗೆ ಸಹಕಾರ ನೀಡಿದ ರಾಜ್ಯದ ಜನತೆ, ಪೊಲೀಸರು ಕೂಡ ಶ್ಲಾಘನೆಗೆ ಪಾತ್ರರಾಗಿದ್ದರು. ಆದರೆ ಇದೇ ಸಂದರ್ಭ ಆ್ಯಂಬುಲೆನ್ಸ್‌ನ ಮುಂದೆ ಮತ್ತು ಹಿಂದೆ ಸಂಚರಿಸುತ್ತಿದ್ದ ಕೆಲ ವಾಹನಗಳು, ಅದರಲ್ಲಿದ್ದ ಯುವಕರ ದುಸ್ಸಾಹಸದ ವೀಡಿಯೊಗಳು ವೈರಲ್ ಆಗಿವೆ. ಝೀರೋ ಟ್ರಾಫಿಕ್‌ನ ಮಹತ್ವ, ಆ್ಯಂಬುಲೆನ್ಸ್‌ನ ಒಳಗಿದ್ದ ಯುವತಿಯ ಪರಿಸ್ಥಿತಿ, ಆಕೆಯ ಮನೆಯವರ ಸಂಕಟ, ಇಂತಹ ಸಂದರ್ಭಗಳಲ್ಲಿ ನಾಗರಿಕ ಸಮಾಜದ ಸದಸ್ಯರಾಗಿ, ಒಬ್ಬ ಮನುಷ್ಯನಾಗಿ ಮಾಡಬೇಕಾದ ಕರ್ತವ್ಯಗಳನ್ನು ಮರೆತು ಝೀರೋ ಟ್ರಾಫಿಕನ್ನು ಜಾಲಿ ರೈಡ್‌ನಂತೆ ಪರಿಗಣಿಸಿದ ಕೆಲ ಯುವಕರು ಅಮಾನವೀಯವಾಗಿ ವರ್ತಿಸಿದ್ದಾರೆ.
ಝೀರೋ ಟ್ರಾಫಿಕ್ ಆ್ಯಂಬುಲೆನ್ಸ್‌ನ ಮುಂದೆ ಮತ್ತು ಹಿಂದೆ ಇಂತಹ ಹಲವು ವಾಹನಗಳಿದ್ದವು ಮತ್ತು ಅದರಲ್ಲಿದ್ದ ಯುವಕರು ವಿಷಯದ ಗಂಭೀರತೆಯನ್ನು ಅರಿಯದೆ ಹುಚ್ಚುಹುಚ್ಚಾಗಿ ವರ್ತಿಸಿದರು. ಇದರಿಂದಾಗಿ ಕೊನೆಗೆ ಝೀರೋ ಟ್ರಾಫಿಕ್‌ನ ಬಗ್ಗೆಯೇ ಅಸಮಾಧಾನದ ಮಾತುಗಳು ಕೇಳಿ ಬಂದವು. ಝೀರೋ ಟ್ರಾಫಿಕ್‌ನಂತಹ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು. ಸ್ವತಃ ಆ್ಯಂಬುಲೆನ್ಸ್ ಚಾಲಕ ಹನೀಫ್ ಸಾಮಾಜಿಕ ಹೊಣೆಗಾರಿಕೆ ಅರಿಯದ ಯುವಕರ ಕೃತ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಪ್ರಶ್ನೆ ಇರುವುದು ‘ಝೀರೋ ಟ್ರಾಫಿಕ್’ ಎನ್ನುವ ವ್ಯವಸ್ಥೆಯ ನಡುವೆ ಈ ಯುವಕರು ನುಸುಳಿದ್ದು ಹೇಗೆ?, ಝೀರೋ ಟ್ರಾಫಿಕ್‌ನಲ್ಲಿ ಸಾಗಬೇಕಾಗಿದ್ದ ವಾಹನಗಳ ಪಟ್ಟಿಯಲ್ಲಿ ಇವರ ವಾಹನಗಳು ಕೂಡ ಇತ್ತೇ? ಪೊಲೀಸ್ ಇಲಾಖೆಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ?. ಯುವತಿಯೊಬ್ಬಳ ಆರೋಗ್ಯಕ್ಕೆ ಸಂಬಂಧಿಸಿದ ಈ ಪ್ರಯಾಣದಲ್ಲಿ ಬೇಜವಾಬ್ದಾರಿಯುತ ಘಟನೆಗಳಿಗೆ ಕಾರಣವಾದದ್ದೇನು ಎನ್ನುವುದು. ಕೆಲ ಕಿಡಿಗೇಡಿಗಳ ಕೃತ್ಯದಿಂದಾಗಿ ‘ಝೀರೋ ಟ್ರಾಫಿಕ್’ನಲ್ಲಿ ರೋಗಿಗಳನ್ನು ಸಾಗಿಸುವ ಮಹತ್ವದ ಕಾರ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಮತ್ತು ಇನ್ನು ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕಡಿವಾಣ ಹಾಕಬೇಕು. ‘ಝೀರೋ ಟ್ರಾಫಿಕ್’ ಎನ್ನುವುದು ಸಂಭ್ರಮಾಚರಣೆಯಲ್ಲ, ಅದೊಂದು ಜವಾಬ್ದಾರಿ.







