ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಶೇ. 70ಕ್ಕೂ ಅಧಿಕ ಮತದಾನ
ತಿರುವನಂತಪುರಂ, ಡಿ.8: ಕೇರಳದಲ್ಲಿ ಮಂಗಳವಾರ ನಡೆದ ಸ್ಥಳೀಯ ಸಂಸ್ಥೆಗಳ ಪ್ರಥಮ ಹಂತದ ಚುನಾವಣೆಯಲ್ಲಿ ಶೇ. 70ಕ್ಕೂ ಅಧಿಕ ಮತದಾನವಾಗಿದೆ ಎಂದು ವರದಿ ತಿಳಿಸಿದೆ.
ಪ್ರಥಮ ಹಂತದಲ್ಲಿ ಮಂಗಳವಾರ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಆಳಪ್ಪುಳ ಮತ್ತು ಇಡುಕ್ಕಿಯಲ್ಲಿ ಮತದಾನ ನಡೆದಿದೆ. ಆಳಪ್ಪುಳದ 5 ಮತಗಟ್ಟೆಗಳಲ್ಲಿ ತಿರುವನಂತಪುರಂನ 2 ಮತ್ತು ಕೊಲ್ಲಂನ 1 ಮತಗಟ್ಟೆಗಳಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷದಿಂದ ಕೆಲ ಹೊತ್ತು ಮತದಾನಕ್ಕೆ ಅಡ್ಡಿ ಉಂಟಾಯಿತು. ಕೆಲವು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಾಗ ಮತದಾರರು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಶಿಷ್ಟಾಚಾರವಾದ ಸುರಕ್ಷಿತ ಅಂತರದ ನಿಯಮವನ್ನು ಉಲ್ಲಂಘಿಸಿರುವ ಆರೋಪವೂ ಕೇಳಿ ಬಂದಿದೆ. ತಿರುವನಂತಪುರಂನ ಚಾಲ ಮತ್ತು ಚೆಂಪಳಂತಿ ಸೇರಿದಂತೆ ಕೆಲವು ಮತಗಟ್ಟೆಗಳಲ್ಲಿ ನಕಲಿ ಮತದಾನದ ಬಗ್ಗೆಯೂ ದೂರು ವ್ಯಕ್ತವಾಗಿದೆ.
ತಿರುವನಂತಪುರಂನ ಕಟ್ಟಕಾಡ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ನೆರವು ನೀಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ನ ಬೂತ್ ಏಜೆಂಟ್ನ ಮೇಲೆ ಸಿಪಿಎಂ ಕಾರ್ಯಕರ್ತರು ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ. ಬಳಿಕ ಬೂತ್ನ ಹೊರಗಡೆ ಎರಡೂ ಪಕ್ಷದ ಕಾರ್ಯಕರ್ತರು ಜಮಾಯಿಸಿದಾಗ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ಚದುರಿಸಿದರು.
ಕೊಲ್ಲಂನಲ್ಲಿ ಮತಗಟ್ಟೆಯ ಅಧಿಕಾರಿಯೊಬ್ಬರು ಎಲ್ಡಿಎಫ್ ಚುನಾವಣಾ ಚಿಹ್ನೆಯಿರುವ ಮಾಸ್ಕ್ ಧರಿಸಿರುವುದಕ್ಕೆ ಕಾಂಗ್ರೆಸ್ನಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ಬದಲಿಸಲಾಗಿದೆ. ರಾಜ್ಯದ ಇಬ್ಬರು ಪ್ರಮುಖ ರಾಜಕೀಯ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ವಿಎಸ್ ಅಚ್ಯುತಾನಂದನ್ ಮತ್ತು ಎಕೆ ಆ್ಯಂಟನಿ ಈ ಬಾರಿ ಅನಾರೋಗ್ಯದ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಅಸಾಧ್ಯವಾಗಿದೆ.