ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನಟರಾಜನ್ ಗೆ ನೀಡಿ ಅಭಿಮಾನಿಗಳ ಹೃದಯ ಗೆದ್ದ ಪಾಂಡ್ಯ

ಸಿಡ್ನಿ: ಸಿಡ್ನಿಯಲ್ಲಿ ಇಂದು ನಡೆದ ಅಂತಿಮ ಟಿ20ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು, ಆದರೆ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.
ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಆದರೆ ತನಗೆ ಲಭಿಸಿದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಾರ್ದಿಕ್ ಪಾಂಡ್ಯ ಅವರು ಯುವ ವೇಗದ ಬೌಲರ್ ಟಿ.ನಟರಾಜನ್‌ಗೆ ಹಂಚುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ತಮ್ಮ ಚೊಚ್ಚಲ ಸರಣಿಯಲ್ಲೇ ಪ್ರಭಾವಿ ಬೌಲಿಂಗ್ ಸಂಘಟಿಸಿರುವ ನಟರಾಜನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ಬಗ್ಗೆ ಹಾರ್ದಿಕ್ ಪಾಂಡ್ಯ ಟ್ವೀಟ್ ಕೂಡಾ ಮಾಡಿದ್ದು, 'ನಟರಾಜನ್, ಈ ಸರಣಿಯಲ್ಲಿ ನೀವು ಅದ್ಭುತ. ಭಾರತಕ್ಕಾಗಿ ಪದಾರ್ಪಣೆ ಮಾಡಿದ ಸರಣಿಯಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವುದು ನಿಮ್ಮ ಪ್ರತಿಭೆ ಹಾಗೂ ಕಠಿಣ ಪರಿಶ್ರಮವನ್ನು ತೋರಿಸುತ್ತದೆ. ನನ್ನ ಕಡೆಯಿಂದ ನೀವು ಸರಣಿಶ್ರೇಷ್ಠ ಪ್ರಶಸ್ತಿಗೆ ಅರ್ಹವಾಗಿದ್ದೀರಿ ಸಹೋದರ' ಎಂದು ಉಲ್ಲೇಖಿಸಿದ್ದಾರೆ.
ನಟರಾಜನ್ ಚೊಚ್ಚಲ ಟಿ20 ಪಂದ್ಯದಲ್ಲಿ ಮೂರು ವಿಕೆಟ್ ಸೇರಿದಂತೆ ಸರಣಿಯಲ್ಲಿ ಒಟ್ಟು ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಒಟ್ಟು 78 ರನ್ ಗಳಿಸಿದ್ದರು. ಇದರಲ್ಲಿ ದ್ವಿತೀಯ ಪಂದ್ಯದಲ್ಲಿ ಬಾರಿಸರುವ ಅಜೇಯ 42 ರನ್(22 ಎಸೆತ) ಸೇರಿತ್ತು.
ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಾರ್ದಿಕ್ ಪಾಂಡ್ಯ ಅವರು ನಟರಾಜನ್ ಗೆ ಹಂಚುವ ಚಿತ್ರವನ್ನು ಸ್ವತ: ಹಾರ್ದಿಕ್ ಪಾಂಡ್ಯ ಅವರೇ ಟ್ವಿಟರ್ ಖಾತೆಯಲ್ಲಿ ಹಂಚಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಅಭಿಮಾನಿಗಳಿಂದ ವ್ಯಾಪಕ ಮನ್ನಣೆಗೆ ಪಾತ್ರವಾಗಿದೆ.







