ಎಲ್ಲ ಮಾದರಿಯ ಕ್ರಿಕೆಟ್ ನಿಂದ ಪಾರ್ಥಿವ್ ಪಟೇಲ್ ನಿವೃತ್ತಿ

ಅಹಮದಾಬಾದ್: ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಪಾರ್ಥಿವ್ ಪಟೇಲ್ ಟ್ವಿಟರ್ ಮೂಲಕ ಎಲ್ಲ ಮಾದರಿಯ ಕ್ರಿಕೆಟ್ ನಿಂದ ಇಂದು ನಿವೃತ್ತಿ ಘೋಷಿಸಿದರು.
2002ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಟೇಲ್ 17ನೇ ವಯಸ್ಸಿನಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿದ್ದರು. ಆ ನಂತರ 25 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 31.13ರ ಸರಾಸರಿಯಲ್ಲಿ ಒಟ್ಟು 934 ರನ್ ಗಳಿಸಿದ್ದಾರೆ. ಪಟೇಲ್ ಭಾರತದ ಪರ 38 ಏಕದಿನ ಹಾಗೂ 2 ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ.
ಪಟೇಲ್ 2018ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಜರ್ಸಿಯನ್ನು ಕೊನೆಯ ಬಾರಿ ಧರಿಸಿ ಆಡಿದ್ದರು.
ದೇಶೀಯ ಕ್ರಿಕೆಟ್ ನಲ್ಲಿ ತನ್ನ ಛಾಪು ಮೂಡಿಸಿದ್ದ ಪಟೇಲ್ 194 ಪ್ರಥಮ ದರ್ಜೆ ಪಂದ್ಯಗಳಲ್ಲಿ 11,000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕ ಹಾಗೂ 67 ಅರ್ಧಶತಕಗಳಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಪಟೇಲ್ ಅವರು ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹಿತ ಇತರ ತಂಡಗಳಲ್ಲಿ ಆಡಿದ್ದರು.







