ಭೂ ಸುಧಾರಣೆ ತಿದ್ದುಪಡಿ ಮಸೂದೆ ಹೇಗೆ ರೈತ ವಿರೋಧಿ: ರೈತ ಸಂಘಟನೆಗಳಿಗೆ ಕುಮಾರಸ್ವಾಮಿ ಪ್ರಶ್ನೆ

ಕೋಲಾರ, ಡಿ.9: ಭೂ ಸುಧಾರಣೆ ತಿದ್ದುಪಡಿ ಮಸೂದೆ ಯಾವ ರೀತಿಯಲ್ಲಿ ರೈತ ವಿರೋಧಿ? ಈ ಮಸೂದೆಯಲ್ಲಿರುವ ಮಾರಕವಾದ ಅಂಶಗಳು ಯಾವುದು ಎಂಬುದನ್ನು ರೈತ ಸಂಘಟನೆಗಳನ್ನು ಕೇಳಬಯಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ-2020 ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕಾರ ಪಡೆಯುವಲ್ಲಿ ಸರಕಾರವನ್ನು ಬೆಂಬಲಿಸಿದ್ದ ಜೆಡಿಎಸ್ ಕುರಿತಂತೆ ವ್ಯಕ್ತವಾಗುತ್ತಿರುವ ಟೀಕೆಗೆ ಸಂಬಂಧಿಸಿ ಕೋಲಾರದಲ್ಲಿ ಇಂದು ಅವರು ರೀತಿ ಪ್ರತಿಕ್ರಿಯಿಸಿದರು.
ಕೆಲವರು, ಕೆಲ ಸಂಘಟನೆಗಳು ಜೆಡಿಎಸ್ ಪಕ್ಷಕ್ಕೆ ರೈತದ್ರೋಹಿ ಎನ್ನುವ ಪಟ್ಟ ಕಟ್ಟಲು ಹೊರಟಿದೆ. ಆದರೆ ನಾನು 14 ತಿಂಗಳ ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದೆ. ಆ ವೇಳೆ ರೈತ ಸಂಘಟನೆಗಳು ನನ್ನ ಪರವಾಗಿ ಮಾತನಾಡಿಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಆರಂಭಿಕ ಹಂತದಲ್ಲಿ ನಾನು ಮತ್ತು ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದು ನಿಜ. ಈ ಮಸೂದೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲು ಕಳೆದ ಅಧಿವೇಶನದಲ್ಲಿ ಸಲಹೆ ನೀಡಿದ್ದೆ. ನಾನು ನೀಡಿದ ಸಲಹೆಯಂತೆ ಬಿಲ್‌ನಲ್ಲಿ ಬದಲಾವಣೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.







