ನ್ಯೂಝಿಲ್ಯಾಂಡ್ ಮಸೀದಿ ದಾಳಿಕೋರ ದಾಳಿಗೂ ಮೊದಲು ಭಾರತದಲ್ಲಿ ಮೂರು ತಿಂಗಳು ಉಳಿದುಕೊಂಡಿದ್ದ: ವರದಿ

ಕ್ರೈಸ್ಟ್ ಚರ್ಚ್ : ಕಳೆದ ವರ್ಷ ನ್ಯೂಝಿಲ್ಯಾಂಡ್‍ನ ಕ್ರೈಸ್ಟ್ ಚರ್ಚ್ನ ಎರಡು ಮಸೀದಿಗಳಲ್ಲಿ ನಡೆದ ಗುಂಡಿನ ದಾಳಿಗಳಲ್ಲಿ 51 ಮಂದಿ ಮುಸ್ಲಿಮರ ಹತ್ಯೆಗೆ ಕಾರಣನಾಗಿದ್ದ ಆಸ್ಟ್ರೇಲಿಯಾ ಸಂಜಾತ ಬ್ರೆಂಟನ್ ಟರ್ರೆಂಟ್ ಈ ದಾಳಿ ನಡೆಸುವ ಮುನ್ನ ಜಗತ್ತಿನ ವಿವಿಧ ದೇಶಗಳಿಗೆ ಪಯಣಿಸಿದ್ದನಲ್ಲದೆ ಭಾರತದಲ್ಲೂ ಮೂರು ತಿಂಗಳು ಉಳಿದುಕೊಂಡಿದ್ದ ಎಂದು ಮಂಗಳವಾರ ಈ ಘಟನೆಯ ವಿಸ್ತ್ರತ ವರದಿಯಲ್ಲಿ ತಿಳಿಸಲಾಗಿದೆ. ಮಾರ್ಚ್ 2019ರಲ್ಲಿ ನಡೆದ ಈ ಉಗ್ರ ದಾಳಿಯಲ್ಲಿ ಹತರಾದವರಲ್ಲಿ ಐವರು ಭಾರತೀಯರೂ ಸೇರಿದ್ದರು.
ರಾಯಲ್ ಕಮಿಷನ್ ಆಫ್ ಇಂಕ್ವೈರಿಯ 792 ಪುಟಗಳ ವರದಿಯಲ್ಲಿ ತಿಳಿಸಲಾದಂತೆ 30 ವರ್ಷದ ದಾಳಿಕೋರ ಶಾಲೆಯನ್ನು ತೊರೆದ ನಂತರ ಸ್ಥಳೀಯ ಜಿಮ್ ಒಂದರಲ್ಲಿ ಪರ್ಸನಲ್ ಟ್ರೈನರ್ ಆಗಿ 2012ರ ತನಕ ಕೆಲಸ ಮಾಡಿದ್ದ. ನಂತರ ಯಾವುದೇ ಕೆಲಸ ಮಾಡದ ಈತ ತಂದೆಯಿಂದ ದೊರೆತ ಹಣ ಹಾಗೂ ಹೂಡಿಕೆಗಳಿಂದ ದೊರೆತ ಆದಾಯ ಬಳಸಿ ವಿವಿಧ ದೇಶಗಳಿಗೆ ಭೇಟಿ ನೀಡಿದ್ದ. ಮೊದಲು 2013ರಲ್ಲಿ ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಸುತ್ತಾಡಿದ್ದ ಈತ ಎಪ್ರಿಲ್ 2014 ಹಾಗೂ ಆಗಸ್ಟ್ 17, 2017ರ ನಡುವೆ ಜಗತ್ತಿನ ವಿವಿಧ ದೇಶಗಳಿಗೆ ಸುತ್ತಾಡಿದ್ದ. ಉತ್ತರ ಕೊರಿಯಾಗೆ ಗ್ರೂಪ್ ಟೂರ್ ಹೋಗಿದ್ದ ಹೊರತಾಗಿ ಇತರ ದೇಶಗಳಿಗೆ ಏಕಾಂಗಿಯಾಗಿಯೇ ಭೇಟಿ ನೀಡಿದ್ದ’’ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆತ ವಿದೇಶಗಳಲ್ಲಿ ಗರಿಷ್ಠ ಸಮಯ ಕಳೆದಿದ್ದು ಭಾರತದಲ್ಲಿ ಹಾಗೂ ಇಲ್ಲಿ ನವೆಂಬರ್ 21, 2015ರಿಂದ ಫೆಬ್ರವರಿ 18, 2016ರ ತನಕ ಉಳಿದುಕೊಂಡಿದ್ದ ಎಂದು ವರದಿಯಲ್ಲಿ ಹೇಳಲಾಗಿದ್ದರೂ ಭಾರತದಲ್ಲಿ ಮೂರು ತಿಂಗಳು ಇದ್ದ ವೇಳೆ ಆತ ಏನು ಮಾಡಿದ್ದ ಎಂಬ ಕುರಿತು ವರದಿಯಲ್ಲಿ ಉಲ್ಲೇಖವಿಲ್ಲ.
ಆತ ಭಾರತ ಹೊರತಾಗಿ ಚೀನಾ, ರಷ್ಯಾ, ದಕ್ಷಿಣ ಕೊರಿಯಾ, ಜಪಾನ್ ದೇಶಗಳಿಗೆ ಭೇಟಿ ನೀಡಿದ್ದ ಎಂದು 18 ತಿಂಗಳ ಅವಧಿಯಲ್ಲಿ ಸಿದ್ಧಪಡಿಸಲಾದ ವರದಿಯಲ್ಲಿ ತಿಳಿಸಲಾಗಿದೆ.
ಆದರೆ ವಿದೇಶ ಭೇಟಿ ವೇಳೆ ಆತ ಯಾವುದೇ ಉಗ್ರ ಸಂಘಟನೆ ಜತೆ ಸಂಪರ್ಕ ಸಾಧಿಸಿರುವ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು ನ್ಯೂಝಿಲ್ಯಾಂಡ್‍ನ ಮಾಧ್ಯಮಗಳು ವರದಿ ಮಾಡಿವೆ.







