“ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ಜತೆ ನಾವು ನಿಲ್ಲುತ್ತೇವೆ"
ಹೇಳಿಕೆ ಬಿಡುಗಡೆ ಮಾಡಿದ 100ಕ್ಕೂ ಅಧಿಕ ಮಾಜಿ ಸೇನಾಧಿಕಾರಿಗಳು

ಹೊಸದಿಲ್ಲಿ : ಕೇಂದ್ರ ಜಾರಿಗೊಳಿಸಿರುವ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜಧಾನಿ ದಿಲ್ಲಿಯ ಗಡಿ ಪ್ರದೇಶಗಳಲ್ಲಿ ಕಳೆದ ಹಲವಾರು ದಿನಗಳಿಂದ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿ ಭಾರತೀಯ ಸೇನಾ ಪಡೆಗಳ 128 ಮಂದಿ ಮಾಜಿ ಅಧಿಕಾರಿಗಳು ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
“ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ಜತೆ ನಾವು ನಿಲ್ಲುತ್ತೇವೆ, ಅವರ ಬೇಡಿಕೆಗಳನ್ನು ಬೆಂಬಲಿಸುತ್ತೇವೆ,'' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಕಾನೂನುಗಳನ್ನು ಜಾರಿಗೊಳಿಸುವಾಗ ಸಂಬಂಧಿತರ ಜತೆ ಯಾವುದೇ ಚರ್ಚೆಗಳು ನಡೆದಿಲ್ಲದ ಕಾರಣ ಈ ಕಾನೂನುಗಳನ್ನು ವಾಪಸ್ ಪಡೆಯಬೇಕೆಂಬ ರೈತರ ಆಗ್ರಹವನ್ನು ಸರಕಾರ ಪರಿಗಣಿಸಬೇಕು,'' ಎಂದು ಮಾಜಿ ಸೇನಾಧಿಕಾರಿಗಳು ಹೇಳಿದ್ದಾರೆ. ನವೆಂಬರ್ 26 ಹಾಗೂ 27ರಂದು ದಿಲ್ಲಿಯತ್ತ ಹೊರಟಿದ್ದ ರೈತರನ್ನು ತಡೆಯುವ ಉದ್ದೇಶದಿಂದ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಬಳಸಿರುವುದನ್ನೂ ಅವರ ಹೇಳಿಕೆ ಖಂಡಿಸಿದೆ.
“ಈ ಶಾಂತಿಯುತ ಪ್ರತಿಭಟನೆಗೆ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಹಾಗೂ ಭಾರತದ ಸಂವಿಧಾನವನ್ನು ಎತ್ತಿ ಹಿಡಿಯಲು ಪಣ ತೊಡುತ್ತೇವೆ,'' ಎಂದೂ ಹೇಳಿಕೆ ತಿಳಿಸಿದೆ. ಭಾರತದ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶೇ. 80ರಷ್ಟು ಮಂದಿ ಕೃಷಿ ಹಿನ್ನೆಲೆಯವರು ಎಂದು ಹೇಳಿ ಜವಾನ್-ಕಿಸಾನ್ ನಂಟನ್ನೂ ಅವರು ನೆನಪಿಸಿದ್ದಾರೆ.





