"ರಾಜಕೀಯ ನಿಲುವಿನಿಂದ ಕೆಲಸ ಕಳೆದುಕೊಳ್ಳುವಂತಿದ್ದರೆ ಅಂಜುವುದಿಲ್ಲ'': ನಟ ಮುಹಮ್ಮದ್ ಝೀಶಾನ್ ಅಯ್ಯುಬ್

Photo: Twitter
ಮುಂಬೈ: ತಮ್ಮ ರಾಜಕೀಯ ನಿಲುವುಗಳಿಂದಾಗಿ ಕೆಲಸ ಕಳೆದುಕೊಳ್ಳಬೇಕಾಗಿ ಬಂದರೆ ನಾನು ಅದಕ್ಕೆ ಅಂಜುವುದಿಲ್ಲ ಎಂದು ತಮ್ಮ ನೇರಾನೇರ ಮಾತುಗಳಿಗೆ ಹೆಸರು ಪಡೆದಿರುವ ಬಾಲಿವುಡ್ ನಟ ಮುಹಮ್ಮದ್ ಝೀಶಾನ್ ಅಯ್ಯುಬ್ ಹೇಳಿದ್ದಾರೆ.
‘ರಾನ್ಝನಾ’, ‘ತನು ವೆಡ್ಸ್ ಮನು’, ‘ಆರ್ಟಿಕಲ್ 15’ ಮುಂತಾದ ಚಲನಚಿತ್ರಗಳಲ್ಲಿ ನಟಿಸಿರುವ ಝೀಶನ್ ಇತ್ತೀಚೆಗೆ ದಿಲ್ಲಿಯಲ್ಲಿ ಕಳೆದ ಹಲವು ದಿನಗಳಿಂದ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿಯೂ ಈಗಾಗಲೇ ಹೇಳಿಕೆಗಳನ್ನು ನೀಡಿದ್ದಾರೆ.
“ಕೆಲವು ಕೆಲಸಗಳನ್ನು ಕಳೆದುಕೊಳ್ಳುವ ಭಯ ಆಗಾಗ ನನ್ನ ಮನಸ್ಸಿನಲ್ಲಿ ಬರುತ್ತದೆ. ನಾನು ನನ್ನ ದನಿಯೆತ್ತಲು ಆರಂಭಿಸಿದಂದಿನಿಂದ ಇಂತಹ ಒಂದು ಸಂಗತಿ ನಡೆಯಬಹುದೆಂದು ನನಗೆ ಗೊತ್ತಿತ್ತು. ನನ್ನ ರಾಜಕೀಯ ನಿಲುವಿನಿಂದಾಗಿ ನನಗೆ ಕೆಲಸ ನೀಡಲು ಭಯ ಪಡುವ ಮಂದಿಯ ಜತೆ ನಾನು ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇನೆ. ಇಂತಹ ಹೇಡಿಗಳ ಜತೆ ಕೆಲಸ ಮಾಡಿ ಪ್ರಯೋಜನವಿಲ್ಲ,'' ಎಂದು ಅವರು ಹೇಳಿದ್ದಾರೆ.
“ಅದೇ ಸಮಯ ನನ್ನ ಸಿದ್ಧಾಂತಗಳಿಗೆ ತದ್ವಿರುದ್ಧ ಸಿದ್ಧಾಂತ ಹೊಂದಿದ ಜನರೊಂದಿಗೆ ಕೆಲಸ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ. ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ ಹಾಗೂ ಎಲ್ಲರಿಗೂ ತಮ್ಮದೇ ಆದ ಅಭಿಪ್ರಾಯ ಹೊಂದುವ ಹಕ್ಕಿದೆ. ಆದರೆ ನಾನು ರಾಜಕೀಯ ವಿಚಾರಗಳ ಕುರಿತು ಮಾತನಾಡುತ್ತೇನೆಂದು ನಿಮಗೆ ನನ್ನ ಜತೆ ಕೆಲಸ ಮಾಡಲು ಭಯವಿದೆಯೆಂದಾದರೆ, ಕ್ಷಮಿಸಿ ನಿಮ್ಮ ಜತೆ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ,'' ಎಂದು ಝೀಶನ್ ಹೇಳುತ್ತಾರೆ.
ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಅಲಿಘರ್ ಮುಸ್ಲಿಂ ವಿವಿ ವಿದ್ಯಾರ್ಥಿಗಳಿಗೆ ಮೊದಲು ಬೆಂಬಲ ಘೋಷಿಸಿದ ಸೆಲೆಬ್ರಿಟಿಗಳ ಪೈಕಿ ಅಯ್ಯುಬ್ ಕೂಡ ಸೇರಿದ್ದಾರೆ.







