ಡಿ.15ರಿಂದ ಪೊನ್ನಂಪೇಟೆಯಲ್ಲಿ 'ಸಿ.ಪಿ.ಎಚ್.ಎಲ್- 2020' ಹಾಕಿ ಪಂದ್ಯಾವಳಿ

ಪೊನ್ನಂಪೇಟೆ, ಡಿ.9: ಕೊಡಗು ಜಿಲ್ಲೆಯಲ್ಲೆ ಇದೇ ಮೊದಲ ಬಾರಿಗೆ ಪುರುಷರಿಗಾಗಿ 'ಕೂರ್ಗ್ ಪ್ರೀಮಿಯರ್ ಹಾಕಿ ಲೀಗ್-2020 (ಸಿ.ಪಿ.ಎಚ್.ಎಲ್)' ಪಂದ್ಯಾವಳಿಯನ್ನು ಡಿ.15ರಿಂದ 20ರವರೆಗೆ ಆಯೋಜಿಸಲಾಗಿದೆ. ಈ ಪಂದ್ಯಾವಳಿಯು ಹಾಕಿ ಕೂರ್ಗ ಸಂಸ್ಥೆಯ ಸಹಯೋಗದಲ್ಲಿ ಪೊನ್ನಂಪೇಟೆಯ ಹಾಕಿ ಟರ್ಫ್ ಕ್ರೀಡಾಂಗಣದಲ್ಲಿ 5 ದಿನಗಳ ಕಾಲ ನಡೆಯಲಿದೆ ಎಂದು ಸಿ.ಪಿ.ಎಚ್.ಎಲ್. ಆಯೋಜನಾ ಸಮಿತಿಯ ಅಧ್ಯಕ್ಷ ಬುಟ್ಟಿಯಂಡ ಎ. ಚಂಗಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಂದ್ಯಾವಳಿಯು ಮೊದಲ ಹಂತ ಮಾತ್ರ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ನಾಕ್ಔಟ್ ಮಾದರಿಯಲ್ಲಿರಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳು ಮಾತ್ರ ಭಾಗವಹಿಸಲಿದ್ದು, ತಂಡ ಗರಿಷ್ಠ ತಲಾ 18 ಆಟಗಾರರನ್ನು ಹೊಂದಬಹುದಾಗಿದೆ. ಸಿ.ಪಿ.ಎಚ್.ಎಲ್ -2020ಗಾಗಿ ರಾಜ್ಯ, ಅಂತಾರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮೂಲತಃ ಕೊಡಗಿನ 90 ಆಟಗಾರರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ತಂಡಗಳಿಗೆ ಆಟಗಾರರನ್ನು ಆಯ್ಕೆಗೊಳಿಸಲು ಡಿ.10ರಂದು ಗೋಣಿಕೊಪ್ಪಲಿನಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದೆ ಎಂದು ಚಂಗಪ್ಪ ಮಾಹಿತಿ ನೀಡಿದರು.
ಪಂದ್ಯಾವಳಿ ಆಯೋಜನಾ ಸಮಿತಿಯ ಮುಖ್ಯಸ್ಥ ಮೂಕಚಂಡ ನಾಚಪ್ಪ ಮಾತನಾಡಿ, ಸಿ.ಪಿ.ಎಚ್.ಎಲ್ -2020ಗಾಗಿ ಆಯ್ದ ಮಾಲಕರ ಒಡೆತನದಲ್ಲಿ 5 ಹಾಕಿ ತಂಡಗಳು ಸಿದ್ಧಗೊಂಡಿವೆ. ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರ ಮಾಲಕತ್ವದ ಗೋಣಿಕೊಪ್ಪಲಿನ 'ಸೌತ್ ಕೂರ್ಗ್ ಕ್ಲಬ್', ಅಂತಾರಾಷ್ಟ್ರೀಯ ಖ್ಯಾತಿಯ ಮಾಜಿ ರಗ್ಬಿ ಆಟಗಾರ ಮಾದಂಡ ಪಿ. ತಿಮ್ಮಯ್ಯ ಮಾಲಕತ್ವದ ವಿರಾಜಪೇಟೆಯ 'ಪ್ರಗತಿ ಸ್ಪೋರ್ಟ್ಸ್ ಅಕಾಡಮಿ', ಬೆಂಗಳೂರಿನ ಗುಮ್ಮಟ್ಟೀರ ಮುತ್ತಣ್ಣ, ದೀಪಕ್ ದೇವಯ್ಯ ಮತ್ತು ಮಧು ಮಂದಣ್ಣ ಅವರ ಮಾಲಕತ್ವದ 'ಗೌರ್ಸ್', ಬೆಂಗಳೂರಿನ ಅರೆಯಡ ಪವಿನ್ ಪೊನ್ನಣ್ಣ ಮಾಲಕತ್ವದ 'ಪವನ್ ಪೊನ್ನಣ್ಣ ಫೌಂಡೇಶನ್(ಪಿ.ಪಿ.ಎಫ್)', ಮತ್ತು ಕಡಮಕೊಲ್ಲಿಯ ಕಾಳಿಮಾಡ ಶರತ್ ಅವರ ಮಾಲಕತ್ವದ 'ಜಿಯಾನ ಗ್ರೂಪ್' ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ ಎಂದು ವಿವರಣೆ ನೀಡಿದರು.
ಡಿ.10ರಂದು ಸಂಜೆ 4 ಗಂಟೆಗೆ ಗೋಣಿಕೊಪ್ಪಲಿನ ಪಾಪೇರ ಸಭಾಂಗಣದಲ್ಲಿ ಐದು ತಂಡಗಳ ಮಾಲಕರ ಸಮ್ಮುಖದಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ. ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಗಳಿಗೆ ನಗದು ಬಹುಮಾನ ಮತ್ತು ಆಕರ್ಷಕ ಪಾರಿತೋಷಕವನ್ನು ನೀಡಿ ಗೌರವಿಸಲಾಗುವುದು. ವಿಜೇತ ತಂಡಗಳಿಗೆ ನೀಡುವ ಟ್ರೋಫಿಯನ್ನು ಜಸ್ಟ್ ಕೊಡವ ಮೊಬೈಲ್ ಆ್ಯಪ್ ಮತ್ತು ಬೆಂಗಳೂರು ರಿಯಲ್ ಎಸ್ಟೇಟ್ ಸಂಸ್ಥೆಯ ಕುಟ್ಟಡ ಸುದೀನ್ ಮಂದಣ್ಣ ಪ್ರಾಯೋಜಿಸಿದ್ದಾರೆ ಎಂದು ನಾಚಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿ ಆಯೋಜನಾ ಸಮಿತಿಯ ಉಪಾಧ್ಯಕ್ಷರಾದ ಕುಪ್ಪಂಡ ದಿಲನ್ ಮತ್ತು ಸಣ್ಣುವಂಡ ಲೋಕೇಶ್ ಉಪಸ್ಥಿತರಿದ್ದರು.







