ಮಹಿಳೆಯರಿಗೆ ಘನತೆಯ ಬದುಕು ನೀಡಿದ್ದು ಅಂಬೇಡ್ಕರ್ : ಜಯನ್ ಮಲ್ಪೆ

ಮಲ್ಪೆ, ಡಿ.9: ಸಂವಿಧಾನ ಎಂದರೆ ಮೀಸಲಾತಿ ಮತ್ತು ದಲಿತರಿಗೆ ವಿಶೇಷ ಸೌಲಭ್ಯಗಳು ಅಂತ ನಮ್ಮ ಜನ ತಿಳಿದುಕೊಂಡಿದ್ದಾರೆ. ಆದರೆ ದೇಶದ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಘನತೆಯನ್ನು ತಂದು ಕೊಟ್ಟಿದ್ದು ಸಂವಿಧಾನದ ಮೂಲಕ ಅಂಬೇಡ್ಕರ್ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಮೂಡುಬೆಟ್ಟು ಅಂಬೇಡ್ಕರ್ ಯುವ ಮಹಿಳಾ ಘಟಕ ರವಿವಾರ ಆಯೋಜಿಸಿದ್ದ ಸಂವಿಧಾನದ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರ 64ನೇ ಪರಿನಿಬ್ಬಾಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂವಿಧಾನದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದು ಳಿದಿರುವ ಎಲ್ಲಾ ಜಾತಿ, ಧರ್ಮದವರಿಗೆ ವಿಶೇಷ ಸೌಲ್ಯಗಳನ್ನು ನೀಡಲಾಗಿದೆ. ನಮ್ಮ ಸಂವಿಧಾನ ನಮಗೆ ಸಂಪೂರ್ಣ ಅರ್ಥವಾಗಬೇಕಾದರೆ ಮೊದಲು ಈ ದೇಶದ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದವರು ನುಡಿದರು.
ಮುಖ್ಯ ಅತಿಥಿಯಾಗಿ ಸುಮಿತ್ ನೆರ್ಗಿ ಮಾತನಾಡಿ ನಮ್ಮ ಸಂವಿಧಾನವನ್ನು ಕಳೆದು ಕೊಳ್ಳುವ ಆತಂಕವೀಗ ಇದಿರಾಗಿದೆ. ಸಂವಿಧಾನವೆನ್ನುವುದು ಒಂದು ಪುಸ್ತಕವಲ್ಲ, ಅದು ನಮ್ಮ ಬದುಕಿನ ವಿಧಾನ ಎಂದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷೆ ಕುಸುಮ ವಹಿಸಿದ್ದರು. ದಲಿತ ಮುಖಂಡ ಗಣೇಶ್ ನೆರ್ಗಿ, ಸುಂದರ್ ಕಪ್ಪಟ್ಟು, ಹರೀಶ್ ಸಲ್ಯಾನ್, ರಮೇಶ್ ಪಾಲ್, ದಿನೇಶ್ ಜವನೆರಕಟ್ಟೆ, ಮಹೇಶ್ ಮೂಡಬೆಟ್ಟು ಮುಂತಾದವರು ಮಾತನಾಡಿದರು.







