ಗುರುವಾರ ಸಾರಿಗೆ ನೌಕರರ ಬೃಹತ್ ಪ್ರತಿಭಟನೆ: ರಾಜ್ಯಾದ್ಯಂತ ಸಾರಿಗೆಯಲ್ಲಿ ವ್ಯತ್ಯಯ ಸಾಧ್ಯತೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.9: ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಗುರುವಾರ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲು ಮುಂದಾಗಿದ್ದು, ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ, ಬಿಎಂಟಿಸಿ ಹಾಗೂ ವಿವಿಧ ವಿಭಾಗಗಳ ಸಾರಿಗೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನಸೌಧವರೆಗೂ 'ಸಾರಿಗೆ ನೌಕರರ ನಡಿಗೆ- ಸರಕಾರಿ ನೌಕರರಾಗುವ ಕಡೆಗೆ' ಎಂಬ ಘೋಷಣೆಯೊಂದಿಗೆ ಜಾಥ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ನೌಕರರ ಕುಟುಂಬದವರ ಸಮೇತ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಹಾಗೂ ಬಿಎಂಟಿಸಿ ಸೇರಿ ಅಂದಾಜು 1.25 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಹಬ್ಬ ಹಾಗೂ ಇತರೆ ಸಮಾರಂಭಗಳ ಸಂದರ್ಭದಲ್ಲಿ ಕುಟುಂಬದ ಜತೆಗೆ ಕಳೆಯಲು ಸಾಧ್ಯವಾಗದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಿಯಾದ ಊಟ, ತಿಂಡಿಯಿಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಸರಕಾರ ನಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸದಿರುವುದು ದುರಂತ ಎಂದು ಸಾರಿಗೆ ನೌಕರರು ಆಕ್ರೋಶ ಹೊರ ಹಾಕಿದ್ದಾರೆ.
ಸರಕಾರ ಬೇರೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಸರಕಾರ ಕೆಳಗೆ ಬರುವಂತಹ ಸಾರಿಗೆ ಇಲಾಖೆಯ ಸಿಬ್ಬಂದಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಸಾರಿಗೆ ನೌಕರರಿಗೆ ಆರೋಗ್ಯ ಭದ್ರತೆ, ಉದ್ಯೋಗ ಭದ್ರತೆಯಿಲ್ಲ. ನಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಮೂರು ವರ್ಷಗಳಿಂದ ನಿರಂತರವಾಗಿ ಸರಕಾರಕ್ಕೆ ಮನವಿ ಮಾಡುತ್ತಿದ್ದರೂ ಇದುವರೆಗೂ ನಮ್ಮನ್ನು ಪರಿಗಣಿಸದಿರುವುದು ದುರಂತ. ಕೂಡಲೇ ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
ನಾಳೆ(ಡಿ.10) ನಡೆಯಲಿರುವ ಹೋರಾಟದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ್, ನಂಜಾವಧೂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆಯು ಮಾಹಿತಿ ನೀಡಿದೆ.







