ವಿಧಾನಸಭೆಯಲ್ಲಿ 3,320 ಕೋಟಿ ರೂ.ಗಳ ಪೂರಕ ಅಂದಾಜಿಗೆ ಅನುಮೋದನೆ

ಬೆಂಗಳೂರು, ಡಿ.9: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ 2020-21ನೆ ಸಾಲಿನ ಪೂರಕ ಅಂದಾಜುಗಳ 3320.40 ಕೋಟಿ ರೂ.ಗಳ ಎರಡನೆ ಕಂತಿಗೆ ವಿಧಾನಸಭೆ ಬುಧವಾರ ಅನುಮೋದನೆ ನೀಡಿತು.
ಕೃಷಿ ಮತ್ತು ತೋಟಗಾರಿಕೆ-192 ಕೋಟಿ ರೂ., ಪಶುಸಂಗೋಪನೆ ಮತ್ತು ಮೀನುಗಾರಿಕೆ-396 ಕೋಟಿ ರೂ., ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ-121 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ-185 ಕೋಟಿ ರೂ., ಸಹಕಾರ-423 ಕೋಟಿ ರೂ., ಸಮಾಜ ಕಲ್ಯಾಣ-352 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ-392 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು-712 ಕೋಟಿ ರೂ., ಕಂದಾಯ-219 ಕೋಟಿ ರೂ., ವಸತಿ-155 ಕೋಟಿ ರೂ., ಜಲಸಂಪನ್ಮೂಲ-368 ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ-617 ಕೋಟಿ ರೂ.ಸೇರಿದಂತೆ ಒಟ್ಟು 3320.40 ಕೋಟಿ ರೂ.ಗಳನ್ನು ಪೂರಕ ಅಂದಾಜು ಹೊಂದಿದೆ.
ಈ ಸಂಬಂಧದ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸರಕಾರ ಈ ಹಿಂದೆ ಪೂರಕ ಅಂದಾಜಿನ ಮೊದಲನೆ ಕಂತು 4800 ಕೋಟಿ ರೂ.ಗಳಿಗೆ ಮಂಡಿಸಿತ್ತು. ಈ ಬಾರಿ 3320.40 ಕೋಟಿ ರೂ.ಗಳಿಗೆ ಎರಡನೆ ಕಂತು ಮಂಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹ ಕಡಿಮೆಯಾಗುತ್ತದೆ. ಹೊಸ ಸೇವೆಗಳು ಬಂದಾಗ, ಒಂದು ಇಲಾಖೆಗೆ ನಾವು ಕೊಟ್ಟಿರುವ ಅನುದಾನ ಸಾಲದೆ ಹೋದಾಗ ಪೂರಕ ಅಂದಾಜು ಮಂಡನೆಯ ಪ್ರಶ್ನೆ ಬರುತ್ತದೆ ಎಂದರು.
ಸರಕಾರ ಇಷ್ಟು ದುಡ್ಡನ್ನು ಹೇಗೆ ಭರಿಸುತ್ತದೆ, ಯಾವ ಬಾಬ್ತುಗಳಲ್ಲಿ ಕಡಿಮೆ ಮಾಡುತ್ತೀರಾ, ಈ ವರ್ಷಕ್ಕೆ ಇನ್ನು ಎರಡು ಕಂತುಗಳು ಬಂದರೂ ಬರಬಹುದು. ತೆರಿಗೆ ವಸೂಲಿ ಆಗಿಲ್ಲ, ಜಿಎಸ್‍ಟಿ ಯಲ್ಲಿ ನಿರೀಕ್ಷಿತ ದುಡ್ಡು ಬಂದಿಲ್ಲ. ಯಾವ ಮೂಲದಿಂದ ಕ್ರೋಢಿಕರಣ ಮಾಡುತ್ತೀರಾ? ಅಭಿವೃದ್ಧಿಗೆ ಹಣ ಹೋಗುತ್ತಿರುವುದು ಕಡಿಮೆ. ಸುಮಾರು 2800 ಕೋಟಿ ರೂ.ಗಳಷ್ಟು ಕೇವಲ ಸಂಬಳ, ಸಾರಿಗೆಗೆ ಹೋಗುತ್ತಿದೆ. ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲರ ವೇತನ, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನಿಂತು ಹೋಗಿದೆ ಇದರಲ್ಲಿ ಆ ವಿಷಯಗಳೆ ಕಾಣುತ್ತಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದಲ್ಲಿ 69 ಲಕ್ಷ ಜನರಿಗೆ ವಿವಿಧ ಬಗೆಯ ಪಿಂಚಣಿ ನೀಡಲಾಗುತ್ತಿದೆ. ಅಕ್ಟೋಬರ್ ವರೆಗೆ 67.05 ಲಕ್ಷ ಜನರಿಗೆ ಪಿಂಚಣಿ ಕೊಡಲಾಗಿದೆ. ಆಧಾರ್ ಜೋಡಣೆ ಸೇರಿದಂತೆ ಇನ್ನಿತರ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಗೊಂದಲ ಆಗಿದೆ. ಅದನ್ನು ಬಗೆಹರಿಸಿ ಉಳಿದವರಿಗೂ ಪಿಂಚಣಿ ಸಿಗುವಂತೆ ಕ್ರಮ ಜರುಗಿಸಲಾಗುವುದು ಎಂದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಪಿಂಚಣಿದಾರರ ಖಾತೆಗಳಿಗೆ ಆಧಾರ್ ಜೋಡಣೆ ಮಾಡುತ್ತಿದ್ದೇವೆ. ತಾಲೂಕು ಕಚೇರಿಗಳು, ಅಂಚೆ ಕಚೇರಿಗಳಲ್ಲಿ ಪಿಂಚಣಿದಾರರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಆಧಾರ್ ಜೋಡಣೆಗೆ ಚಾಲನೆ ನೀಡಿರುವುದರಿಂದ ಈವರೆಗೆ 3-4 ಲಕ್ಷ ನಕಲಿ ಕಾರ್ಡ್ ಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ವಾರ್ಷಿಕವಾಗಿ 400-500 ಕೋಟಿ ರೂ.ಗಳು ಬೋಗಸ್ ಆಗಿ ಹೋಗುತ್ತಿತ್ತು. ಮೃತಪಟ್ಟಿರುವವ ಖಾತೆಗಳಿಗೂ ಪಿಂಚಣಿ ಹೋಗುತ್ತಿತ್ತು. ಆಧಾರ್ ಸಂಖ್ಯೆ ಜೋಡಣೆಗೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದರು.
ಈ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ ಅನ್ನದಾನಿ, ತಾಲೂಕು ಕಚೇರಿಗಳಲ್ಲಿ ಇರುವ ಏಜೆಂಟರು 40-50 ವರ್ಷದವರಿಗೂ 60 ವರ್ಷದವರು ಎಂದು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪಿಂಚಣಿ ಕೊಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಸದಸ್ಯ ಭೀಮಾ ನಾಯ್ಕ್ ಮಾತನಾಡಿ, ತಹಶೀಲ್ದಾರ್ ಅವರಿಗಿಂತ ಕೆಳಹಂತದಲ್ಲಿರುವ ಅಧಿಕಾರಿಗಳು ಇಂತಹ ಅಕ್ರಮಗಳಲ್ಲಿ ಶಾಮೀಲಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಪಿಂಚಣಿದಾರರು ಸಲ್ಲಿಸುವ ಆಧಾರ್ ಕಾರ್ಡ್‍ನಲ್ಲಿಯೆ ಅವರ ವಯಸ್ಸಿನ ದೃಢೀಕರಣವಾಗುತ್ತದೆ. ಆದಾಯ ಪ್ರಮಾಣ ಪತ್ರ ನಮ್ಮಬಳಿ ಇರುತ್ತದೆ. ಕೇವಲ ಬ್ಯಾಂಕ್ ಖಾತೆಯ ಪಾಸ್ ಬುಕ್ ಮಾತ್ರ ನಾವು ಕೇಳುತ್ತೇವೆ. ಅಲ್ಲದೆ, ಅಂಚೆ ಕಚೇರಿಗಳ ಮೂಲಕ ಪಿಂಚಣಿ ವಿತರಿಸುವುದನ್ನು ರದ್ದು ಮಾಡಲಾಗುವುದು. 60 ವರ್ಷಮೇಲ್ಪಟ್ವರಿಗೆ ತಹಶೀಲ್ದಾರ್ ಕಚೇರಿಯಿಂದಲೇ ಮನೆಗೆ ಪತ್ರ ಬರುತ್ತದೆ. ಪಿಂಚಣಿಯ ಅಗತ್ಯವಿದ್ದಲ್ಲಿ ಪತ್ರ ತಲುಪಿದ 14 ದಿನಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಅರ್ಜಿ ಇಲ್ಲದೆ ಪಿಂಚಣಿ ನೀಡುವ ಕೆಲಸ ಮಾಡುತ್ತೇವೆ. ಗ್ರಾ.ಪಂ.ಚುನಾವಣೆ ಮುಗಿದ ಬಳಿಕ ಇದಕ್ಕೆ ಚಾಲನೆ ನೀಡಲಾಗುವುದು ಎಂದರು.
ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಜೆಟ್‍ನಲ್ಲಿ 1500 ಕೋಟಿ ರೂ.ಅನುದಾನ ನೀಡುವುದಾಗಿ ಸರಕಾರ ಘೋಷಣೆ ಮಾಡಿತ್ತು. 1100 ಕೋಟಿ ರೂ.ಗಳಿಗೆ ಕ್ರಿಯಾ ಯೋಜನೆ ಬಂದಿದೆ. ಈವರೆಗೆ ಅದಕ್ಕೆ ಅನುಮೋದನೆ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ವರ್ಷದ ಹಣಕಾಸಿನ ಸ್ಥಿತಿ ಬಗ್ಗೆ ಹೊಸದಾಗಿ ತಮಗೆ ಮನವರಿಕೆ ಮಾಡಬೇಕಿಲ್ಲ. ಸಂಕಷ್ಟದ ಸಂದರ್ಭದಲ್ಲಿಯೂ 1100 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಆದಷ್ಟು ಬೇಗ ಕೆಲಸಗಳು ಆರಂಭವಾಗುತ್ತವೆ ಎಂದರು. ಇದೇ ವೇಳೆ ಪೂರಕ ಅಂದಾಜಿನ ಎರಡನೆ ಕಂತಿನ ಜೊತೆಗೆ ಮುಖ್ಯಮಂತ್ರಿ ಮಂಡಿಸಿದ 2020ನೆ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕ ಸಂಖ್ಯೆ 4ಕ್ಕೆ ಅನುಮೋದನೆ ಸಿಕ್ಕಿತು.







