ಶೋವಿಕ್ ಚಕ್ರವರ್ತಿ ಡ್ರಗ್ಸ್ ಖರೀದಿಗೆ ನೆರವಾಗಿರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ: ವಿಶೇಷ ನ್ಯಾಯಾಲಯ

ಮುಂಬೈ, ಡಿ.9: ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಡ್ರಗ್ಸ್ ಒದಗಿಸುತ್ತಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ನಟಿ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಲಯ, ಆರೋಪಿ ತಪ್ಪಿತಸ್ಥನಲ್ಲ ಎಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದು ಹೇಳಿದೆ.
ಶೋವಿಕ್‌ಗೆ ಕಳೆದ ವಾರ ಮುಂಬೈಯ ವಿಶೇಷ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಇದಕ್ಕೂ ಮುನ್ನ ಜಾಮೀನು ಅರ್ಜಿ ಎರಡು ಬಾರಿ ತಿರಸ್ಕೃತವಾಗಿತ್ತು. ಶೋವಿಕ್ ಚಕ್ರವರ್ತಿ ನಿಷೇಧಿತ ಮಾದಕ ವಸ್ತುಗಳ(ಡ್ರಗ್ಸ್) ಕಳ್ಳಸಾಗಣಿಕೆ ಮತ್ತು ವ್ಯವಹಾರ ನಡೆಸುತ್ತಿದ್ದ ಜಾಲದ ಒಂದು ಭಾಗವಾಗಿದ್ದಾರೆ ಎಂಬುದಕ್ಕೆ ಸೂಕ್ತ ಆಧಾರಗಳಿವೆ ಎಂದು ಕಳೆದ ತಿಂಗಳು ಉಲ್ಲೇಖಿಸಿದ್ದ ಬಾಂಬೆ ಹೈಕೋರ್ಟ್ , ಶೋವಿಕ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಳ್ಳಿಹಾಕಿತ್ತು. ಬಳಿಕ ಅವರು ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಆರೋಪಿಯು ಡ್ರಗ್ಸ್‌ನ ಅಕ್ರಮ ಸಾಗಾಟಕ್ಕೆ ಹಣಕಾಸಿನ ನೆರವು ಒದಗಿಸುವ ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವ ಮೂಲಕ ಎನ್‌ಡಿಪಿಎಸ್ ಕಾಯ್ದೆಯ 27-ಎ ಸೆಕ್ಷನ್ ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಯಾವುದೇ ವಾಸ್ತವಿಕ ಆಧಾರಗಳಿಲ್ಲ ಎಂದು ಹೇಳಿದ ವಿಶೇಷ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಬಂಧನದ ಸಂದರ್ಭ ಅಧಿಕಾರಿಗಳು ತನ್ನ ಬಳಿಯಿಂದ ಡ್ರಗ್ಸ್ ಜಫ್ತಿ ಮಾಡಿಲ್ಲ. ಕೇವಲ ಮಾದಕ ವಸ್ತು ನಿಯಂತ್ರಣ ಮಂಡಳಿಯ ಹೇಳಿಕೆಯನ್ನು ಆಧರಿಸಿ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶೋವಿಕ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಮುಂಬೈಯ ತನ್ನ ಮನೆಯಲ್ಲಿ ಜೂನ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಡ್ರಗ್ಸ್ ಒದಗಿಸಲು ನೆರವಾಗುತ್ತಿದ್ದ ಆರೋಪದಲ್ಲಿ ಶೋವಿಕ್ ಚಕ್ರವರ್ತಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಸುಮಾರು 3 ತಿಂಗಳ ಸೆರೆವಾಸದ ಬಳಿಕ ಇದೀಗ ಶೋವಿಕ್‌ಗೆ ಜಾಮೀನು ಮಂಜೂರುಗೊಂಡಿದೆ.







