ಉತ್ತರ ಪ್ರದೇಶದ ಮೆಟ್ರೋ ರೈಲು ಸಂಚಾರಕ್ಕೆ ಚೀನಾದ ಗಾಳಿಪಟ ದಾರ ಅಡ್ಡಿ!
ಹೊಸದಿಲ್ಲಿ, ಡಿ. 8: ಲಕ್ನೋದ ಗಾಳಿಪಟ ಹಾರಿಸುವ ಉತ್ಸಾಹಿಗಳ ಚೀನಾ ಮಾಂಜಾ (ಗಾಳಿಪಟ ದಾರ)ದ ಮೇಲಿನ ಪ್ರೀತಿ ಉತ್ತರಪ್ರದೇಶದಲ್ಲಿ ಮೆಟ್ರೊಗೆ ಅತಿ ದೊಡ್ಡ ಆತಂಕ ತಂದೊಡ್ಡಿದೆ.
ಈ ನಿಷೇಧಿತ ದಾರ ಉತ್ತರಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ 500ಕ್ಕೂ ಅಧಿಕ ಮೆಟ್ರೋ ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ಉತ್ತರಪ್ರದೇಶ ಮೆಟ್ರೋ ರೈಲ್ ಕಾರ್ಪೋರೇಶನ್ (ಯುಪಿಎಂಆರ್ಸಿ)ನ ಮೇಲ್ತಂತಿ ವಿದ್ಯುತ್ (ಒಎಚ್ಇ) ವ್ಯವಸ್ಥೆಗೆ ಲೋಹದ ಅಂಶ ಒಳಗೊಂಡ ಚೀನಾ ಗಾಳಿಪಟದ ದಾರ ಹಾನಿ ಉಂಟು ಮಾಡುತ್ತಿದೆ. ಇದರಿಂದ ಮೆಟ್ರೊ ರೈಲು ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ ಎಂದು ಯುಪಿಎಂಆರ್ಸಿ ಹೇಳಿದೆ. ಮೆಟ್ರೊ ಕಾರಿಡಾರ್ ಸಮೀಪ ಗಾಳಿಪಟ ಹಾರಿಸಬೇಡಿ ಎಂದು ಯುಪಿಎಂಆರ್ಸಿ ಜನರಲ್ಲಿ ಮನವಿ ಮಾಡಿದ ಹೊರತಾಗಿಯೂ ಚೀನಾ ಮಾಂಜಾದಿಂದ ಮೇಲ್ತಂತಿ ವಿದ್ಯುತ್ ವ್ಯವಸ್ಥೆಗೆ ಹಾನಿ ಉಂಟಾಗುತ್ತಿದೆ. ಇದರಿಂದ ಮೆಟ್ರೋ ರೈಲಿನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ ಎಂದು ಯುಪಿಎಂಆರ್ಸಿ ಅಧಿಕಾರಿ ತಿಳಿಸಿದ್ದಾರೆ.
ಲಕ್ನೋ ವಿಶ್ವವಿದ್ಯಾನಿಲಯದ ಮೆಟ್ರೋ ಸ್ಟೇಷನ್ನ ಸಮೀಪ ಇರುವ ಮೇಲ್ತಂತಿ ವಿದ್ಯುತ್ ವ್ಯವಸ್ಥೆಗೆ ಸೋಮವಾರ ರಾತ್ರಿ 8.30ರ ಹೊತ್ತಿಗೆ ಚೀನಾ ಮಾಂಜಾ ತಗಲಿದ ಪರಿಣಾಮ ಟ್ರಿಪ್ ಆಗಿತ್ತು ಹಾಗೂ ಮೆಟ್ರೋ ರೈಲು ಸೇವೆಗೆ ಅಡ್ಡಿ ಉಂಟಾಗಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಮೆಟ್ರೋ ಹಳಿಯ ಸಮೀಪ ಚೀನಾ ಮಾಂಜಾ ಬಳಸಿ ಗಾಳಿಪಟ ಹಾರಿಸಿದ ವ್ಯಕ್ತಿಗಳ ವಿರುದ್ಧ 508 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ‘‘ಚೀನಾ ಮಾಂಜಾದಲ್ಲಿ ಲೋಹ ಬಳಸುವುದರಿಂದ ಅದು ವಿದ್ಯುತ್ ವಾಹಕ. ಗಾಳಿಪಟ ಹಾರಿಸಲು ಬಳಸುವ ಕೆಲವು ದಾರಗಳಲ್ಲಿ ತಾಮ್ರದ ವಯರ್ ಅಥವಾ ಮುಳ್ಳಿನಿಂದ ಕೂಡಿದ ಲೋಹದ ವಯರ್ಗಳನ್ನು ಬಳಸಲಾಗುತ್ತಿದೆ. ಈ ರೀತಿಯ ದಾರದ ಬಳಕೆಯಿಂದ ದಾರಿ ಹೋಕರ ಕಣ್ಣು, ಗಂಟಲಿಗೆ ತೀವ್ರ ಸ್ವರೂಪದ ಗಾಯಗಳಾಗುತ್ತಿವೆ. ಅಲ್ಲದೆ, ಪ್ರಾಣಿ ಹಾಗೂ ಪಕ್ಷಿಗಳಿಗೆ ಹಾನಿ ಉಂಟು ಮಾಡುತ್ತಿದೆ’ ಎಂದು ಅವರು ತಿಳಿಸಿದ್ದಾರೆ.