ಆರೋಗ್ಯ ಕವಚ-108 ಆಂಬುಲೆನ್ಸ್ ಸೇವೆಯಲ್ಲಿ ಭಾರೀ ಅಕ್ರಮ: ಸಿಎಜಿ ವರದಿಯಿಂದ ಬಹಿರಂಗ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ. 9: ಆರೋಗ್ಯ ಕವಚ-108 ತುರ್ತು ಆಂಬುಲೆನ್ಸ್ ಸೇವೆಗೆ 8.87 ಲಕ್ಷ ಕೋರಿಕೆಗಳಲ್ಲಿ, 3.74 ಲಕ್ಷ ಪ್ರಕರಣಗಳಲ್ಲಿ ಮಾತ್ರ ಆಂಬುಲೆನ್ಸ್ ಸೇವೆ ದೊರಕಿದೆ. ಆಂಬುಲೆನ್ಸ್ ಗಳ ಹಂಚಿಕೆ ತುರ್ತು ಅಗತ್ಯತೆಯನ್ನು ಆಧರಿಸಿರಲಿಲ್ಲ ಎಂಬುದು ಸೇರಿದಂತೆ ಹಲವು ಅಕ್ರಮಗಳನ್ನು ಭಾರತೀಯ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ-2019(ಸಿಎಜಿ) ಬಹಿರಂಗಪಡಿಸಿದೆ.
ಬುಧವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಎಜಿಯ ಸಾಮಾನ್ಯ ಮತ್ತು ಸಾಮಾಜಿಕ ವಲಯದ ವರದಿಯನ್ನು ಮಂಡಿಸಿದರು. ರಸ್ತೆ ಅಪಘಾತ, ಹೃದಯ ಸಂಬಂಧಿ ಕಾಯಿಲೆ, ಉಸಿರಾಟ ಸಮಸ್ಯೆ ಮತ್ತು ಪಾರ್ಶ್ವವಾಯು ಸೇರಿ ಇನ್ನಿತರ ಪ್ರಕರಣಗಳಲ್ಲಿ ಆಂಬುಲೆನ್ಸ್ ಸೇವೆ ದೊರೆಯದೆ ಹಲವು ಮಂದಿ ಮೃತಪಟ್ಟಿದ್ದಾರೆಂಬ ಆಘಾತಕಾರಿ ಅಂಶವೂ ಸಿಎಜಿ ವರದಿಯಿಂದ ಬಯಲಾಗಿದೆ.
ತುರ್ತು ಸಂದರ್ಭಗಳಲ್ಲಿ ನಾಲ್ಕೈದು ನಿಮಿಷಗಳ ಸಮಯದಲ್ಲಿ ಆಂಬುಲೆನ್ಸ್ ಸೇವೆ ಸಿಗಬೇಕು. ಆದರೆ, ಶೇ.60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆಂಬುಲೆನ್ಸ್ ಸೇವೆ ನಿಗದಿತ ಸಮಯದಲ್ಲಿ ದೊರೆತಿಲ್ಲ. ಶೇ.50ರಷ್ಟು ರೋಗಿಗಳನ್ನು ತುರ್ತು ಸಂದರ್ಭದ ನಿರ್ಣಾಯಕ ಅವಧಿಯಲ್ಲಿ (ಗೋಲ್ಡನ್ ಅವರ್) ಆಸ್ಪತ್ರೆ ತಲುಪಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೂಚನೆಯೂ ಇಲ್ಲ: ರೋಗಿಗಳನ್ನು ಯಾವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂಬ ಸೂಚನೆಯೂ ಇಲ್ಲ. ಇದರಿಂದ ಶೇ.18ರಷ್ಟು ಪ್ರಕರಣಗಳಲ್ಲಿ ರೋಗಿಗಳನ್ನು ಹಸ್ತಾಂತರಿಸುವಲ್ಲಿನ ವಿಳಂಬದಿಂದ ತೀವ್ರ ಸ್ವರೂಪದ ಲೋಪಗಳಾಗಿವೆ. ಅಲ್ಲದೆ, ಆಸ್ಪತ್ರೆ ತಲುಪಿಸಿದ ನಂತರ ರೋಗಿಗಳನ್ನು ದಾಖಲಿಸುವ ಪ್ರಕ್ರಿಯೆಯಲ್ಲಿಯೂ ವಿಳಂಬ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಸ್ತೆ ಅಪಘಾತ, ಹೃದಯದ ಕಾಯಿಲೆ, ಉಸಿರಾಟ ಸಮಸ್ಯೆ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಆಂಬುಲೆನ್ಸ್ ಗಳಲ್ಲಿ ಆಧುನಿಕ ಜೀವ ರಕ್ಷಕ ವ್ಯವಸ್ಥೆಗಳಿರಬೇಕು. ಆದರೆ, ಶೇ.75ರಷ್ಟು ಸಾಮಾನ್ಯ ಜೀವರಕ್ಷಕ ವ್ಯವಸ್ಥೆಯ ಆಂಬುಲೆನ್ಸ್ ಗಳನ್ನು ಮಾತ್ರ ನಿಯೋಜಿಸಲಾಗಿತ್ತು. ಇದರಿಂದ ಹಲವು ರೋಗಿಗಳಿಗೆ ಸಮಸ್ಯೆಯಾಗಿದೆ ಎಂದು ಸಿಎಜಿ ತಿಳಿಸಿದೆ.
ವಿಳಂಬ: ತುರ್ತು ಸೇವೆ ಒದಗಿಸುವ ಆಂಬುಲೆನ್ಸ್ ಗಳನ್ನು ನಿಲ್ಲಿಸಲು ನಿಗದಿತ ವ್ಯವಸ್ಥೆ ಕಲ್ಪಿಸದಿರುವುದರಿಂದ ಸರಕಾರಿ ಆಸ್ಪತ್ರೆಗಳ ಆವರಣಗಳಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ನಿಗದಿ ಸಮಯದಲ್ಲಿ ಸ್ಥಳಕ್ಕೆ ಧಾವಿಸಲಾಗಿಲ್ಲ ಎಂಬ ಅಂಶವೂ ಸೇರಿದಂತೆ ಆಂಬುಲೆನ್ಸ್ ಸೇವೆಯಲ್ಲಿ ಲೋಪದೋಷಗಳನ್ನು ಸಿಎಜಿ ವರದಿ ಬಹಿರಂಗಪಡಿಸಿದೆ.
‘ಪ್ರಜ್ಞೆ ಇಲ್ಲದ ರೋಗಿಯೊಬ್ಬರು ಆಂಬುಲೆನ್ಸ್ ಗಾಗಿ ವಿನಂತಿ ಮಾಡಿದರೂ(ಮಾರ್ಚ್ 2018) ಇಆರ್ಒಯಿಂದ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ಕರೆ ಮಾಡಿದವರು 78 ನಿಮಿಷಗಳಲ್ಲಿ ಆರು ಬಾರಿ ಕರೆ ಮಾಡಿದ್ದರು. ಚಿಕಿತ್ಸಾ ನಿರ್ಧಾರ ಪ್ರಕ್ರಿಯೆಯಲ್ಲಿ ಒಂದು ಕರೆಯನ್ನು ಕಿರುಕುಳ ಕರೆ ಎಂದು ವರ್ಗೀಕರಿಸಲಾಗಿತ್ತು. ಮತ್ತು ಮತ್ತೊಂದು ಕರೆಯ ಸಂಪರ್ಕ ಕಡಿತಗೊಂಡಿತ್ತು ಹಾಗೂ ಆ ಕರೆಯನ್ನು ಹಿಂತಿರುಗಿಸಿ ಮಾಡಿರಲಿಲ್ಲ ಎಂಬುದನ್ನು ಗಮನಿಸಿದ್ದೇವೆ. ಮೂರು ಆಂಬುಲೆನ್ಸ್ ಗಳು ಕಾರ್ಯನಿರತವಾಗಿದ್ದು, ಆದರೆ ಯಾವುದೇ ಆಂಬುಲೆನ್ಸ್ ನಿಯೋಜಿಸಿಲ್ಲ. ಅಲ್ಲದೆ, ನಿಯೋಜಿಸಿದ ಆಂಬುಲೆನ್ಸ್ ರೋಗಿಯನ್ನು ಕರೆದೊಯ್ಯಲು ನಿರಾಕರಿಸಿದ್ದು, ವಿಳಂಬದಿಂದ ರೋಗಿ ಮೃತಪಟ್ಟಿದ್ದಾನೆ.’
-ಭಾರತದ ಲೆಕ್ಕ ಪರಿಶೋಧಕರ ವರದಿಯಿಂದ ಬಹಿರಂಗ







