'ಗೋಹತ್ಯೆ ನಿಷೇಧ' ಅಂಗೀಕಾರ: ಇನ್ನು ಮುಂದೆ ಈ ಸದನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರು, ಡಿ.9: ಸಭಾಧ್ಯಕ್ಷರಾದವರು ಆಡಳಿತ ಪಕ್ಷದವರ ಮಾತೇ ಕೇಳಬೇಕೆ? ಪ್ರಜಾಪ್ರಭುತ್ವ ಅಂದರೆ ಏನು? ವಿರೋಧ ಪಕ್ಷದವರ ಅಭಿಪ್ರಾಯವೇ ಕೇಳದಿದ್ದರೆ ಹೇಗೆ? ನಾಳೆ ಹಾಗೂ ಇನ್ನು ಮುಂದೆ ನಾವು ಈ ಸದನದಲ್ಲಿ ಪಾಲ್ಗೊಳ್ಳದೆ ಬಹಿಷ್ಕಾರ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬುಧವಾರ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರಗೊಂಡ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸದನ ಬಹಿಷ್ಕರಿಸಿ ಜನರ ಬಳಿ ಹೋಗುತ್ತೇವೆ. ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನಿನ ಮೇಲೆ ನಂಬಿಕೆ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುತ್ತೇವೆ ಎಂದರು.
ಸದನ ಕಲಾಪ ಸಲಹಾ ಸಮಿತಿಯಲ್ಲಿ ನಿನ್ನೆ ತೆಗೆದುಕೊಂಡ ತೀರ್ಮಾನಗಳಿಗೆ ನೀವು(ಸ್ಪೀಕರ್) ವಿರುದ್ಧವಾಗಿ ಹೋಗಿದ್ದೀರಾ. ಇದು ಅತ್ಯಂತ ಸ್ಪಷ್ಟವಾಗಿದೆ. ಸಭಾಧ್ಯಕ್ಷರಾದವರು ನೀವೇ ನಮ್ಮ ರಕ್ಷಣೆಗೆ ಬರದಿದ್ದರೆ ನಾವು ಯಾರ ಬಳಿ ಹೋಗಬೇಕು. ಸದನವು ಸಹಜ ಸ್ಥಿತಿಯಲ್ಲಿ ಇಲ್ಲದೆ ಇರುವಾಗ ನೀವು ಮಾಡಿರುವುದು ಏನು ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಸದಸ್ಯರಿಗೆ ನಾನು ಚರ್ಚೆಗೆ ಆಹ್ವಾನ ನೀಡಿದೇನೆ. ಪ್ರತಿಪಕ್ಷದ ಸದಸ್ಯರು ಬಂದಿಲ್ಲ. ಆಡಳಿತ ಪಕ್ಷದ ಕೆಲವು ಸದಸ್ಯರು ಪಾಲ್ಗೊಂಡು ಕೆಲವು ವಿಚಾರಗಳನ್ನು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಭೇದ ಇರುತ್ತದೆ. ಆದರೆ, ಸದನಕ್ಕೆ ಬರುವುದಿಲ್ಲ ಎಂದು ಹೇಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ. ಆದುದರಿಂದ, ನಾಳೆ ಹಾಗೂ ಮುಂದಿನ ಕಲಾಪಗಳಲ್ಲಿ ಪ್ರತಿಪಕ್ಷದ ಸದಸ್ಯರು ಪಾಲ್ಗೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇನೆ ಎಂದರು.
ಜೆಡಿಎಸ್ ಹಿರಿಯ ಸದಸ್ಯ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ನಿನ್ನೆ ಸದನ ಕಲಾಪ ಸಲಹಾ ಸಮಿತಿಯಲ್ಲಿ ಗೋಹತ್ಯೆ ಹಾಗೂ ಲವ್ ಜಿಹಾದ್ ನಿಷೇಧ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ತರಲು ತೀರ್ಮಾನಿಸಲಾಗಿತ್ತು. ಆದರೂ ಸರಕಾರ ಇವತ್ತು ಹೊಸ ವಿಧೇಯಕ ತಂದಿದೆ. ನಾವು ನಾಳೆ ಚರ್ಚೆಗೆ ತೆಗೆದುಕೊಳ್ಳಿ ಎಂದು ಕೇಳಿದರೂ ಏಕಪಕ್ಷೀಯವಾಗಿ ವಿಧೇಯಕವನ್ನು ಮಂಡಿಸಿ, ಅಂಗೀಕಾರ ಪಡೆದುಕೊಳ್ಳಲಾಗಿದೆ. ನಿಮ್ಮ ಧೋರಣೆಯನ್ನು ಖಂಡಿಸಿ ನಾವು ಸಭಾತ್ಯಾಗ ಮಾಡುತ್ತಿದ್ದೇವೆ ಎಂದರು.







