ಉಡುಪಿ: ಪ್ರೊ.ಆಚಾರ್ಯ, ದಾಮೋದರ ಐತಾಳ್‌ರಿಗೆ ಶೃದ್ಧಾಂಜಲಿ

ಉಡುಪಿ, ಡಿ. 9: ಅಗಲಿದ ಉಡುಪಿಯ ಇಬ್ಬರು ಹಿರಿಯ ಸಾಧಕರಾದ ಪ್ರೊ.ಉದ್ಯಾವರ ಮಾಧವ ಆಚಾರ್ಯ ಹಾಗೂ ಕಡಿಯಾಳಿ ದಾಮೋದರ ಐತಾಳರ ಶ್ರದ್ಧಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮ ಪೇಜಾವರ ಮಠದ ಶ್ರೀ ರಾಮವಿಠ್ಠಲ ಸಭಾಭವನದಲ್ಲಿ ಬುಧವಾರ ಸಂಜೆ ನಡೆಯಿತು.
ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರೊ.ಆಚಾರ್ಯರ ಸಹೋದ್ಯೋಗಿ ಹಾಗೂ ಸಹ ರಂಗಕರ್ಮಿಯಾಗಿದ್ದ ಪ್ರೊ.ರಾಮದಾಸ ಮಾತನಾಡಿ,ಉದ್ಯಾವರ ಮಾಧವ ಆಚಾರ್ಯರು ಒಬ್ಬ ಧೀಮಂತ ವ್ಯಕ್ತಿ. ಯಾವುದೇ ಸವಾಲುಗಳನ್ನು ಧೈರ್ಯ ವಾಗಿ ಸ್ವೀಕರಿಸಿ ಗುರಿಮುಟ್ಟುವ ತವಕ ಹೊಂದಿದ್ದರು. ಗ್ರೀಕ್, ಹಳೆಗನ್ನಡ ಸೇರಿದಂತೆ ಎಲ್ಲಾ ನಾಟಕಗಳನ್ನು ಪ್ರಸ್ತುತ ಪಡಿಸುತಿದ್ದರು. ಕಲ್ಪನಾ ಲೋಕದಲ್ಲೂ ನೈಜತೆಯನ್ನು ಬಿಂಬಿಸುವ ಸಾಮರ್ಥ್ಯ ಅವರಲ್ಲಿತ್ತು ಎಂದರು.
ಬಳಕೆದಾರ ವೇದಿಕೆಯ ಸಂಚಾಲಕ ಎ.ಪಿ.ಕೊಡಂಚ ಮಾತನಾಡಿ, ದಾಮೋದರ ಐತಾಳ ಅವರು ಸೌಮ್ಯ ಜೀವನ ನಡೆಸಿಕೊಂಡು ಬಂದವರು. ವೃತ್ತಿಯಿಂದ ನಿವೃತ್ತಿ ಬಳಿಕ ಅವರು ಬಳಕೆದಾರರ ವೇದಿಕೆಯನ್ನು ಸೇರಿಕೊಂಡರು. ಜಿಲ್ಲೆಯಲ್ಲಿ ವೇದಿಕೆಯನ್ನು ಗಟ್ಟಿಗೊಳ್ಳಿಸುವ ನಿಟ್ಟಿನಲ್ಲಿ 80 ಶಾಲೆಗಳಲ್ಲಿ ಗ್ರಾಹಕರ ಶಿಕ್ಷಣವನ್ನು ಪ್ರಾರಂಭಿಸಿದರು ಎಂದರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಮಾಧವಿ ಭಂಡಾರಿ ಮಾತನಾಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್, ಕಾರ್ಯದರ್ಶಿ ಮುರಳೀ ಕಡೇಕಾರ್, ಉಪಾಧ್ಯಕ್ಷ ಎಸ್.ವಿ.ಭಟ್, ಪೇಜಾವರ ಮಠದ ದಿವಾನ್ ರಘುರಾಮ ಆಚಾರ್ಯ, ಸುಬ್ರಹ್ಮಣ್ಯ ಭಟ್, ಪ್ರೊ. ರಾಧಾಕೃಷ್ಣ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.







