‘ಶೀರೂರುಶ್ರೀಗಳಿಂದ ತೆರಿಗೆ ವಂಚನೆಯಾಗಿಲ್ಲ: ಅಪಪ್ರಚಾರದ ವಿರುದ್ಧ ಕಾನೂನು ಹೋರಾಟ’
ಉಡುಪಿ, ಡಿ. 9: ಶೀರೂರು ಮಠದ ದಿ.ಶ್ರೀಲಕ್ಷ್ಮಿವರ ತೀರ್ಥರು ಕೋಟ್ಯಾಂತರ ರೂ. ಆದಾಯ ತೆರಿಗೆ ಬಾಕಿ ಇರಿಸಿದ್ದರು ಎಂಬ ಆರೋಪವನ್ನು ಶೀರೂರು ಮಠ ಭಕ್ತ ಸಮಿತಿ ಉಡುಪಿ ನಿರಾಕರಿಸಿದ್ದು, ಈ ಕುರಿತು ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಉಡುಪಿ ಅಷ್ಟಮಠಗಳಲ್ಲಿ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಶ್ರೀಗಳು, ಪಲಿಮಾರುಶ್ರೀಗಳೊಂದಿಗೆ ಇತ್ತೀಚೆಗೆ ಶೀರೂರು ಮಠದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿರುವುದಾಗಿ ಪತ್ರಿಕಾ ವರದಿಯಿಂದ ತಿಳಿದುಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀಲಕ್ಷ್ಮಿವರ ತೀರ್ಥರು ತಮ್ಮ ಆಡಳಿತಾವಧಿಯಲ್ಲಿ 2017-18ರವರೆಗೆ ಮಾಡಿದ ಎಲ್ಲಾ ತೆರಿಗೆ ಪಾವತಿಯ ವಿವರ ಹಾಗೂ ಪ್ರತಿಗಳು ಲಭ್ಯ ವಿದೆ. ಆದುದರಿಂದ ವರದಿಯಲ್ಲಿ ಮಾಡಲಾದ ಆರೋಪ ನಿರಾಧಾರವಾದುದು ಎಂದು ಅದರಲ್ಲಿ ಹೇಳಲಾಗಿದೆ.
ಆದಾಯ ತೆರಿಗೆ ಇಲಾಖೆಯಿಂದ ನೋಟೀಸು ಜಾರಿಯಾಗಿ ಅದನ್ನು ಒಪ್ಪದಿದ್ದರೆ ಅದರ ನಿಖರತೆಯನ್ನು ಪ್ರಶ್ನಿಸುವುದು ಎಲ್ಲಾ ಸಂಸ್ಥೆಗಳಲ್ಲೂ ಸಹಜ ಪ್ರಕ್ರಿಯೆಯಾಗಿರುತ್ತದೆ. ಆದಾಯ ತೆರಿಗೆ ಇಲಾಖೆಯವರು ನೋಟೀಸು ಜಾರಿ ಗೊಳಿಸಿದ ಕೂಡಲೇ ಮಠದ ಆದಾಯವನ್ನು ಬಹಿರಂಗ ಪಡಿಸುವುದು ದುರುದ್ದೇಶಪೂರಿತವಾಗಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ.
ಈ ಮೂಲಕ ಶೀರೂರು ಮಠದ ಅನುಯಾಯಿಗಳಿಗೆ, ಅಸಂಖ್ಯ ಭಕ್ತರಿಗೆ ಹಾಗೂ ಸಮಾಜಕ್ಕೆ ತಪ್ಪು ಮಾಹಿತಿ ನೀಡಿ ನೋವನ್ನುಂಟು ಮಾಡಲಾಗಿದೆ. ಇದರ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದಾಗಿ ಸಮಿತಿಯ ಸಂಚಾಲಕ ಪಿ.ಲಾತವ್ಯ ಆಚಾರ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಪಿ. ವಾದಿರಾಜ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







