ಪಶ್ಚಿಮಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಗೆ ಅವಕಾಶ ನೀಡುವುದಿಲ್ಲ: ಮಮತಾ ಬ್ಯಾನರ್ಜಿ

ಕೋಲ್ಕತಾ: ತನ್ನ ಸರಕಾರವು ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಅಥವಾ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್)ಜಾರಿಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಪ್ರತಿಪಾದಿಸಿದ್ದಾರೆ.
ರಾಜ್ಯದ ಎಲ್ಲ ನಿವಾಸಿಗಲು ದೇಶದ ನಾಗರಿಕರು. ಅದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಬಳಕೆಯ ಮೂಲಕ ವಿಭಜನಕಾರಿ ರಾಜಕೀಯ ಮಾಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.
ಬಾಂಗ್ಲಾದೇಶ ಗಡಿಯಲ್ಲಿರುವ ಉತ್ತರ 24 ಪರಗಣ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನಾನು, ಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ. ನೀವೆಲ್ಲರೂ ನಾಗರಿಕರು. ಇದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ನಾವು ಎನ್‌ಆರ್‌ಸಿ ಅಥವಾ ಎನ್‌ಪಿಆರ್‌ಗೆ ಅವಕಾಶವನ್ನೇ ನೀಡುವುದಿಲ್ಲ ಎಂದರು.
ಮುಂದಿನ ವರ್ಷದ ಜನವರಿಯಲ್ಲಿ ರಾಜ್ಯದಲ್ಲಿ ಸಿಎಎ ಅನುಷ್ಠಾನವಾಗುವ ಸಾಧ್ಯತೆಯಿದೆ ಎಂದು ಕಳೆದ ವಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪಶ್ಚಿಮಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಹೇಳಿಕೆ ನೀಡಿದ್ದರು.
.





