ಅನ್ಯಗ್ರಹವಾಸಿಗಳು ನಿಜವಾಗಿಯೂ ಇದ್ದಾರೆಂದು ಟ್ರಂಪ್‌ಗೆ ಗೊತ್ತಿದೆ
ಇಸ್ರೇಲ್‌ನ ಮಾಜಿ ಬಾಹ್ಯಾಕಾಶ ಅಧಿಕಾರಿ

ಟೆಲ್ ಅವೀವ್ (ಇಸ್ರೇಲ್), ಡಿ. 9: ಅನ್ಯಗ್ರಹವಾಸಿಗಳು ನಿಜವಾಗಿಯೂ ಇದ್ದಾರೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅದರ ಬಗ್ಗೆ ಗೊತ್ತಿದೆ ಎಂದು ಇಸ್ರೇಲ್‌ನ ಬಾಹ್ಯಾಕಾಶ ಭದ್ರತಾ ಸಂಸ್ಥೆಯ ಮಾಜಿ ಮುಖ್ಯಸ್ಥ, 87 ವರ್ಷದ ಹೈಮ್ ಎಶೆಡ್ ಹೇಳಿದ್ದಾರೆ.
‘‘ಅನ್ಯಗ್ರಹವಾಸಿಗಳ ಅಸ್ತಿತ್ವವನ್ನು ಸ್ವೀಕರಿಸಲು ಮಾನವರು ಇನ್ನೂ ತಯಾರಾಗಿಲ್ಲ. ಹಾಗಾಗಿ, ಅನ್ಯಗ್ರಹ ಜೀವಿಗಳು ತಮ್ಮ ಇರುವಿಕೆಯನ್ನು ಗುಪ್ತವಾಗಿರಿಸಿವೆ’’ ಎಂದು ಇಸ್ರೇಲ್‌ನ ‘ಯೆಡಿಯಟ್ ಹಾರೋನಟ್’ ಎಂಬ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.
ಅಮೆರಿಕ ಸರಕಾರ ಮತ್ತು ಅನ್ಯಗ್ರಹ ಜೀವಿಗಳ ‘ಗ್ಯಾಲಕ್ಸಿ ಒಕ್ಕೂಟ’ದ ನಡುವೆ ಒಂದು ಒಪ್ಪಂದವೂ ಏರ್ಪಟ್ಟಿದೆ ಎಂದೂ ಅವರು ಹೇಳಿದ್ದಾರೆ.
ಹೈಮ್ ಎಶೆಡ್ ಸುಮಾರು ಮೂರು ದಶಕಗಳ ಕಾಲ ಇಸ್ರೇಲ್‌ನ ಬಾಹ್ಯಾಕಾಶ ಭದ್ರತಾ ಕಾರ್ಯಕ್ರಮವನ್ನು ಮುನ್ನಡೆಸಿದ್ದರು.
ಅನ್ಯಗ್ರಹವಾಸಿಗಳೊಂದಿಗೆ ಸಂವಹನ ನಡೆಸುವುದಕ್ಕಾಗಿ ಅಮೆರಿಕವು ಮಂಗಳ ಗ್ರಹದಲ್ಲಿ ರಹಸ್ಯ ಭೂಗತ ನೆಲೆಯೊಂದನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
‘‘ಅನ್ಯಗ್ರಹ ಜೀವಿಗಳನ್ನು ಸ್ವೀಕರಿಸಲು ಮಾನವರು ಇನ್ನೂ ಸಿದ್ಧರಾಗಿಲ್ಲ ಎಂಬುದಾಗಿ ಗ್ಯಾಲಕ್ಸಿ ಒಕ್ಕೂಟ ಹೇಳಿದೆ. ಹಾಗಾಗಿ, ಅವುಗಳ ಬಗ್ಗೆ ಡೊನಾಲ್ಡ್ ಟ್ರಂಪ್ ಏನೂ ಹೇಳುತ್ತಿಲ್ಲ’’ ಎಂದಿದ್ದಾರೆ.
‘‘ನಾನು ಈಗ ಹೇಳುತ್ತಿರುವುದನ್ನು ಐದು ವರ್ಷಗಳ ಹಿಂದೆ ಹೇಳಿದ್ದರೆ ಜನರು ನನ್ನನ್ನು ಆಸ್ಪತ್ರೆಗೆ ಸೇರಿಸುತ್ತಿದ್ದರು’’ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಗಳಿಗೆ ಅಮೆರಿಕ ಸರಕಾರ ಅಥವಾ ಟ್ರಂಪ್‌ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.







