ನಿಮ್ಮದು ಜಾತ್ಯತೀತವೂ ಅಲ್ಲ, ರೈತ ಪರವೂ ಅಲ್ಲ: ಎಚ್‍ಡಿಕೆ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ

ಬೆಂಗಳೂರು, ಡಿ.9: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇರುವುದೇ ಪುಟಗೋಸಿ ರಾಜಕಾರಣ ಮಾಡಲು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ಬುಧವಾರ ನಗರದಲ್ಲಿ ನಡೆದ ರೈತರ ಬಾರುಕೋಲು ಚಳುವಳಿಯ ನೇತೃತ್ವ ವಹಿಸಿ ಮಾತನಾಡಿದ ಅವರು, ಜೆಡಿಎಸ್‍ನವರು ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಮಂಗಳವಾರ ಬೆಳಗ್ಗೆ ಹೇಳಿ, ಸಂಜೆ ವೇಳೆ ಉಲ್ಟಾ ಹೊಡೆದು ಯಡಿಯೂರಪ್ಪನರಿಗೆ ಬೆಂಬಲ ಕೊಡುತ್ತಾರೆ ಎಂದರೆ ಏನು ಅರ್ಥ ಎಂದು ಖಾರವಾಗಿ ಅವರು ಪ್ರಶ್ನಿಸಿದರು.
ಸರಕಾರ ಚರ್ಚೆಗೆ ಆಹ್ವಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ತಡೆದರೂ ಅದನ್ನು ಮೀರಿದ ಹೋರಾಟವನ್ನು ನಾವು ಮಾಡುತ್ತೇವೆ. ಹೋರಾಟ ದಿನದಿಂದ ದಿನಕ್ಕೆ ಬದಲಾಗುತ್ತದೆ ಅಷ್ಟೇ. ನಮ್ಮ ಕುತ್ತಿಗೆಗೆ ನೇಣು ಹಗ್ಗ ಹಾಕಿದ್ದಾರೆ. ಅದನ್ನು ಮೊದಲು ತೆಗೆಯಲಿ ನಂತರ ಚರ್ಚೆಗೆ ಬರುತ್ತೇವೆ ಎಂದರು.
ಬಿಎಸ್‍ವೈ ಜೊತೆ ನಿಮಗೆ ಎಷ್ಟು ವ್ಯವಹಾರ ಆಗಿದೆ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ ಅವರು, ಎಷ್ಟು ಶಾಸಕರನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದೀರಿ. ನಿಮ್ಮದು ಜಾತ್ಯತೀತ ತತ್ವನು ಅಲ್ಲ ಮತ್ತು ರೈತರ ಪರವಾದ ಚಿಂತನೆಯೂ ನಿಮ್ಮ ಪಕ್ಷಕ್ಕಿಲ್ಲ. ನೀವು ಈ ಮಣ್ಣಿನ ದ್ರೋಹಿಗಳು ಎಂದು ಆಕ್ರೋಶ ಹೊರಹಾಕಿದರು.







