ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ದುರ್ಬಳಕೆ: ಬಿಜೆಪಿ ಸದಸ್ಯರಿಂದಲೇ ಧರಣಿಗೆ ಪ್ರೇರಣೆ:
ಕಾಂಗ್ರೆಸ್-ಜೆಡಿಎಸ್ ಬೆಂಬಲ; ಸರಕಾರಕ್ಕೆ ತೀವ್ರ ಮುಜುಗರ

ಬೆಂಗಳೂರು, ಡಿ. 9: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟವರ್ಗ(ಎಸ್ಸಿ-ಎಸ್ಟಿ)ಗಳ ಕಲ್ಯಾಣಕ್ಕಾಗಿ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಮೀಸಲಾದ ಅನುದಾನವನ್ನು ಅನ್ಯ ಉದ್ದೇಶಕ್ಕೆ ದುರ್ಬಳಕೆ ಮಾಡಲಾಗುತ್ತಿದ್ದು, ಅದನ್ನು ಸಂಪೂರ್ಣ ಪರಿಶಿಷ್ಟ ಕಲ್ಯಾಣಕ್ಕೆ ಬಳಕೆ ಮಾಡಬೇಕು ಎಂದು ಆಗ್ರಹಿಸಿ ಆಡಳಿತ ಪಕ್ಷಗಳ ಸದಸ್ಯರೇ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಸತ್ಯಾಗ್ರಹಕ್ಕೆ ಮುಂದಾದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರಾದ ಪಿ. ರಾಜೀವ್, ಎಂ.ಪಿ.ಕುಮಾರಸ್ವಾಮಿ, ಎನ್.ವೈ.ಗೋಪಾಲಕೃಷ್ಣ, ದುರ್ಯೋದನ ಐಹೊಳೆ ಸೇರಿದಂತೆ ಇನ್ನಿತರರು, ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಸ್ಟೀಲ್ ಬ್ರಿಡ್ಜ್, ನಮ್ಮ ಮೆಟ್ರೋ ಯೋಜನೆ, ರಸ್ತೆ, ಸೇತುವೆ ನಿರ್ಮಾಣಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದು ಎಸ್ಸಿಪಿ-ಟಿಎಸ್ಪಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಮಾತ್ರವಲ್ಲ, ಶಿಕ್ಷಾರ್ಹ ಅಪರಾಧವೂ ಆಗುತ್ತದೆ. ಆದುದರಿಂದ ರಾಜ್ಯ ಸರಕಾರ ಕೂಡಲೇ ಇದನ್ನು ತಡೆಗಟ್ಟಬೇಕು. ಪರಿಶಿಷ್ಟ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಆ ವರ್ಗಗಳ ಶ್ರೇಯೋಭಿವೃದ್ಧಿಗೆ ಮಾತ್ರವೇ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಎಂ.ಪಿ.ಕುಮಾರಸ್ವಾಮಿ, ಬಿಎಸ್ಪಿ ಸದಸ್ಯ ಎನ್.ಮಹೇಶ್, ಜೆಡಿಎಸ್‍ನ ಅನ್ನದಾನಿ, ಎಚ್.ಕೆ.ಕುಮಾರಸ್ವಾಮಿ, ಕಾಂಗ್ರೆಸ್‍ನ ಪ್ರಿಯಾಂಕ್ ಖರ್ಗೆ, ಭೀಮಾನಾಯ್ಕ್, ಇ.ತುಕಾರಾಂ, ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಎಸ್ಸಿಪಿ-ಟಿಎಸ್ಪಿ ಕಾಯ್ದೆ ಉಲ್ಲಂಘನೆ. ಇದು ಪರಿಶಿಷ್ಟರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಅಲ್ಲದೆ, ಇದು ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸಮ ಎಂದು ಎಚ್ಚರಿಸಿದರು.
ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಎಸ್ಸಿಪಿ-ಟಿಎಸ್ಪಿ ಅನುದಾನ ಬಳಕೆಯಾಗದಿದ್ದರೆ ಅದನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕಾಯ್ದೆಯಲ್ಲಿ ಎಷ್ಟು ಪ್ರಮಾಣ ಹಣವನ್ನು ಬಳಕೆ ಮಾಡಿಕೊಳ್ಳಬೇಕೆಂಬ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಕುರಿತು ಸಿಎಂ ಜತೆ ಚಿರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಮುಜುಗರ: ಇದರಿಂದ ಆಕ್ರೋಶಿತರಾದ ಬಿಜೆಪಿ ಸದಸ್ಯರಾದ ಎನ್.ವೈ.ಗೋಪಾಲಕೃಷ್ಣ, ಎಂ.ಪಿ.ಕುಮಾರಸ್ವಾಮಿ, ದುರ್ಯೋಧನ ಐಹೊಳೆ, ಗೂಳಿಹಟ್ಟಿ ಡಿ.ಶೇಖರ್ ಸೇರಿದಂತೆ ಇನ್ನಿತರ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗೆ ಬಂದರು. ಇದನ್ನು ಬೆಂಬಲಿಸಿ ಕಾಂಗ್ರೆಸ್- ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗೆ ಬಂದರು.
ಈ ಹಂತದಲ್ಲಿ ಕೂಡಲೇ ಎಚ್ಚೆತ್ತ ಕಾನೂನು ಸಚಿವ ಮಾಧುಸ್ವಾಮಿ ಮತ್ತು ಕಂದಾಯ ಸಚಿವ ಆರ್.ಅಶೋಕ್, ಬಿಜೆಪಿ ಸದಸ್ಯರನ್ನು ವಾಪಸ್ ತಮ್ಮ ಸ್ಥಾನಗಳಿಗೆ ತೆರಳುವಂತೆ ಸೂಚಿಸಿದರು. ಇದರಿಂದ ಸದನದಲ್ಲಿ ಕೆಲಕಾಲ ಗದ್ದಲವು ನಡೆಯಿತು. ಸ್ಪೀಕರ್ ಕಾಗೇರಿ 10 ನಿಮಿಷ ಕಾಲ ಸದನವನ್ನು ಮುಂದೂಡಿದ ಪ್ರಸಂಗವು ನಡೆಯಿತು.
ಆ ಬಳಿಕ ಪುನಃ ಸದನ ಸಮಾವೇಶಗೊಂಡಾಗ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಶಿಷ್ಟ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಅನ್ಯ ಕಾರ್ಯಕ್ಕೆ ಬಳಕೆ ಸರಿಯಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಸಂಖ್ಯೆಯನ್ನು ಆಧರಿಸಿ ಎಸ್ಸಿ-17.15 ಹಾಗೂ ಎಸ್ಪಿ-6.95ರಷ್ಟು ಸೇರಿದಂತೆ ಒಟ್ಟು ಶೇ.24.1ರಷ್ಟು ಅನುದಾನವನ್ನು ಎಸ್ಸಿಪಿ-ಟಿಎಸ್ಪಿ ಕಾಯ್ದೆಯಡಿ ಪರಿಶಿಷ್ಟ ಕಲ್ಯಾಣಕ್ಕೆ ಮೀಸಲಿಡಲಾಗಿದೆ.
ಅನ್ಯ ಉದ್ದೇಶಕ್ಕೆ ಪರಿಶಿಷ್ಟ ಅನುದಾನ ದುರ್ಬಳಕೆ ಸರಿಯಲ್ಲ. 'ಡೀಮ್ಡ್' ಎನ್ನುವ ಪದ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಹೀಗಾಗಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಅವರ ಶ್ರೇಯೋಭಿವೃದ್ಧಿಗೆ ವೆಚ್ಚ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಉತ್ತರ ಹಿಂಪಡೆದ ಶ್ರೀರಾಮುಲು: ಸಚಿವ ಶ್ರೀರಾಮುಲು ಅವರ ಉತ್ತರಕ್ಕೆ ಆಕ್ಷೇಪಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದ ಹಿನ್ನೆಲೆಯಲ್ಲಿ ಶ್ರೀರಾಮುಲು ತಮ್ಮ ಉತ್ತರವನ್ನು ಹಿಂಪಡೆದರು. ಅನಂತರ ಎಲ್ಲ ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಿದರು.







