ಕೋವಿಡ್ ಪರೀಕ್ಷೆ ದರಗಳನ್ನು ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ

ಬೆಂಗಳೂರು, ಡಿ.9: ಖಾಸಗಿ ಪ್ರಯೋಗಾಲಯಗಳಲ್ಲಿನ ವಿವಿಧ ಮಾದರಿಯ ಕೊರೋನ ಪರೀಕ್ಷೆಗಳ ದರವನ್ನು ಪರಿಷ್ಕರಣೆಗೊಳಿಸಲಾಗಿದ್ದು, ಈ ಸಂಬಂಧ ಸರಕಾರ ಆದೇಶ ಹೊರಡಿಸಿದೆ.
ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಸರಕಾರವು ಖಾಸಗಿ ಪ್ರಯೋಗಾಲಯಗಳಿಗೆ ರವಾನಿಸುವ ಮಾದರಿಗೆ 500 ದರ ನಿಗದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಕೊರೋನ ಪರೀಕ್ಷೆಗಳನ್ನು ನಡೆಸಲು ಅಗತ್ಯವಾಗಿರುವ ರಾಸಾಯನಿಕ ಮತ್ತು ಇತರ ಅಗತ್ಯ ವಸ್ತುಗಳ ದರಗಳು ಕಡಿಮೆಯಾಗಿದೆ. ಆದುದರಿಂದಾಗಿ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಿ, ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಪರೀಕ್ಷೆಗಳ ದರವನ್ನು ಇಳಿಕೆ ಮಾಡಲಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಿಂದ(ಐಸಿಎಂಆರ್) ಮಾನ್ಯತೆ ಪಡೆದ ರಾಜ್ಯದ ಪ್ರಯೋಗಾಲಯಗಳಿಗೆ ಮಾತ್ರ ನೂತನ ದರ ಅನ್ವಯವಾಗುತ್ತದೆ. ದೃಢಪಡಿಸುವ ಹಾಗೂ ತಪಾಸಣೆ ಶುಲ್ಕ ಮತ್ತು ಪಿಪಿಇ ಕಿಟ್‍ಗಳ ವೆಚ್ಚವೂ ನಿಗದಿತ ದರದಲ್ಲಿಯೇ ಅಡಕವಾಗಲಿದ್ದು, ಹೆಚ್ಚುವರಿ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಕೋವಿಡ್ 19 ವ್ಯಕ್ತಿಯು ನೇರವಾಗಿ ಖಾಸಗಿ ಪ್ರಯೋಗಾಲಯಗಳಿಗೆ ತೆರಳಿ ಆರ್‍ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ ನಿಗದಿಪಡಿಸಿಕೊಳ್ಳುವರಿಗೆ ನಿಗದಿಪಡಿಸಲಾದ ಶುಲ್ಕವನ್ನು 800ಕ್ಕಿಳಿಸಲಾಗಿದೆ. ಈ ಹಿಂದೆ ಸರಕಾರವು ಖಾಸಗಿ ಪ್ರಯೋಗಾಲಯಗಳಿಗೆ ಆರ್‍ಟಿ-ಪಿಸಿಆರ್ ಪರೀಕ್ಷೆಗೆ ರವಾನಿಸುವ ಮಾದರಿಯ ಪ್ರತಿ ಪರೀಕ್ಷೆಗೆ 800, ವ್ಯಕ್ತಿ ನೇರವಾಗಿ ಪ್ರಯೋಗಾಲಯಗಳಿಗೆ ತೆರಳಿ ಮಾಡಿಸಿಕೊಳ್ಳುವ ಪರೀಕ್ಷೆಗೆ 1,200 ಪಾವತಿ ಮಾಡಬೇಕಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಟ್ರೂ ನ್ಯಾಟ್ ಪರೀಕ್ಷೆಗೆ 1,250: ಟ್ರೂ ನ್ಯಾಟ್ ಪರೀಕ್ಷೆಯ ದರವನ್ನೂ ಸರಕಾರವು ಕಡಿತಗೊಳಿಸಿದೆ. ಈ ಹಿಂದೆ ವ್ಯಕ್ತಿಯು ಖಾಸಗಿ ಆಸ್ಪತ್ರೆಗೆ ತೆರಳಿ ಈ ಮಾದರಿಯ ಪರೀಕ್ಷೆ ಮಾಡಿಸಿಕೊಂಡ ಪಕ್ಷದಲ್ಲಿ 2,220 ಪಾವತಿ ಮಾಡಬೇಕಿತ್ತು. ಆದರೆ, ಈಗ ಆ ದರವನ್ನು 1,250 ಕ್ಕೆ ಕಡಿತ ಮಾಡಲಾಗಿದೆ. ಇದೇ ರೀತಿ ಸಿಬಿ ನ್ಯಾಟ್ ಪರೀಕ್ಷೆಯ ದರವನ್ನು 2,800 ರೂ.ಗಳಿಂದ 2,400 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಲ್ಲಿ ನಡೆಸುವ ರ್ಯಾಪಿಡ್ ಆಂಟಿಬಾಡಿ ಪರೀಕ್ಷೆಗೆ 500 ರೂ.ಗಳು ಹಾಗೂ ರ್ಯಾಪಿಡ್ ಆಂಟಿಜನ್ ಪರೀಕ್ಷೆಗೆ 400 ನಿಗದಿ ಮಾಡಲಾಗಿದೆ. ಈ ಎಲ್ಲ ಮಾದರಿಯ ಪರೀಕ್ಷೆಗಳಿಗೆ ಮಾದರಿಗಳನ್ನು ಮನೆಯಿಂದ ಸಂಗ್ರಹಿಸಬೇಕಾದಲ್ಲಿ ಒಂದು ಮನೆಯ ಸಂಗ್ರಹಣಾ ಶುಲ್ಕವು 400 ಮೀರಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.







