ಎಪಿಎಂಸಿ ತಿದ್ದುಪಡಿ ವಿಧೇಯಕ ವಿಧಾನಪರಿಷತ್‍ನಲ್ಲಿ ಅಂಗೀಕಾರ

ಬೆಂಗಳೂರು, ಡಿ.9: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ದಿ) ತಿದ್ದುಪಡಿ ವಿಧೇಯಕ-2020ಕ್ಕೆ ವಿಧಾನಪರಿಷತ್‍ನಲ್ಲಿ ಪ್ರತಿಪಕ್ಷ ಕಾಂಗ್ರೆಸ್‍ನ ಸಭಾತ್ಯಾಗದ ನಡುವೆಯೂ ಧ್ವನಿಮತದ ಮೂಲಕ ಅಂಗೀಕಾರಗೊಂಡಿತು.
ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ಬುಧವಾರ ರಾತ್ರಿ 9.30 ಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಉತ್ತರ ನೀಡಿದ ಬಳಿಕ ವಿಧೇಯಕಕ್ಕೆ ಅನುಮತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಇದು ರೈತರ ವಿರೋಧಿಯಾಗಿದ್ದು, ಸರಕಾರ ವಿಧೇಯಕವನ್ನು ಹಿಂಪಡೆಯಬೇಕು ಅಥವಾ ಸಲಹಾ ಸಮಿತಿಗೆ ಒಪ್ಪಿಸಬೇಕೆಂದು ಕೋರಿದ್ದೆವು. ಆದರೆ, ನಮ್ಮ ಮಾತಿಗೆ ಬೆಲೆ ನೀಡದ ಹಿನ್ನೆಲೆಯಲ್ಲಿ ನಾವು ಸಭಾತ್ಯಾಗ ಮಾಡಲಾಗುತ್ತಿದೆ ಎಂದು ಘೋಷಿಸಿ ಸದನದಿಂದ ಹೊರ ನಡೆದರು.
ಈ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರು ವಿಧೇಯಕವನ್ನು ಮತಕ್ಕೆ ಹಾಕಬೇಕು ಎಂದು ಸಭಾಪತಿಯನ್ನು ಒತ್ತಾಯಿಸುತ್ತಲೇ ಇದ್ದರೂ, ಯಾವುದಕ್ಕೂ ತಲೆ ಹಾಕದೇ ಧ್ವನಿಮತದ ಮೂಲಕ ವಿಧೇಯಕವನ್ನು ಮಂಡಿಸಿ, ಅಂಗೀಕಾರಗೊಂಡಿದೆ ಎಂದು ಘೋಷಿಸುವ ಮೂಲಕ ಸದನವನ್ನು ಮುಂದೂಡಿದರು.





