ಡಿ.10ರಂದು ರೈತ ಸಂಘಟನೆಗಳಿಂದ ರಾಜಭವನ ಮುತ್ತಿಗೆ
ಬೆಂಗಳೂರು, ಡಿ.9: ಭೂ-ಸುಧಾರಣಾ ತಿದ್ದುಪಡಿ ಕಾಯ್ದೆ ಸೇರಿದಂತೆ ಇನ್ನಿತರೆ ರೈತ ಕಾಯ್ದೆ, ಸುಗ್ರಿವಾಜ್ಞೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ರೈತ ಸಂಘನಟೆಗಳು ನಾಳೆ(ಡಿ.10) ಬೆಂಗಳೂರಿನಲ್ಲಿ ರಾಜಭವನ ಮುತ್ತಿಗೆ ಚಳುವಳಿಗೆ ಕರೆ ನೀಡಿವೆ.
ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಚಳುವಳಿ ನಡೆಯಲಿದ್ದು, ನಾಳೆ ಬೆಳಗ್ಗೆ 10 ಗಂಟೆ ಸುಮಾರಿಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿಯಿಂದ ಭಾರೀ ಸಂಖ್ಯೆಯಲ್ಲಿ ರೈತ ವರ್ಗ ಮೆರವಣಿಗೆ ನಡೆಸಲಿದೆ.
ಮುಖ್ಯವಾಗಿ ರಾಜ್ಯ ಸರಕಾರ, ಈ ಕೂಡಲೇ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು. ಜತೆಗೆ, ಯಾವುದೇ ರೀತಿಯ ಸುಗ್ರೀವಾಜ್ಞೆಗಳಿಗೆ ಮಾನ್ಯತೆ ನೀಡಬಾರದು ಎನ್ನುವುದು ಹೋರಾಟದ ಮುಖ್ಯ ಉದ್ದೇಶವಾಗಿದೆ. ಆದರೆ, ಹೋರಾಟಕ್ಕೂ ಮುನ್ನ ಸರಕಾರ ಅಥವಾ ಪೊಲೀಸರು ನಮ್ಮನ್ನು ತಡೆಯುವ ಪ್ರಯತ್ನ ಮಾಡಬಾರದೆಂದು ಸಮಿತಿಯ ಪ್ರಮುಖರಾದ ಕೃಷಿ ತಜ್ಞ ಡಾ.ಪ್ರಕಾಶ್ ಕಮ್ಮರಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಬುಧವಾರವೂ ಮುಂದುವರಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಕೊನೆಗೂ ರೈತರ ವಂಶವನ್ನೇ ಯಡಿಯೂರಪ್ಪ ಸರಕಾರ ನಿರ್ವಂಶ ಮಾಡಿದೆ. ಅವರು ರೈತ ಪರ ಅಲ್ಲ. ಬದಲಾಗಿ ಕೋಟುಬೂಟು ಹಾಕಿರುವ ರೈತರ ಪರ ಎಂದು ವಾಗ್ದಾಳಿ ನಡೆಸಿದರು.
ಕಿಕ್ ಬ್ಯಾಕ್ ಕೊಟ್ಟಿರುವವರು ಇವರನ್ನು ನಿದ್ದೆ ಮಾಡಲು ಬಿಡದೇ ಇದ್ದಿದ್ದಕ್ಕೆ ತುರಾತುರಿಯಲ್ಲಿ ಯಡಿಯೂರಪ್ಪ ಮಸೂದೆ ಅಂಗೀಕಾರ ಮಾಡಿದ್ದಾರೆ. ಇನ್ನು, ಸದನದಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಬೆಂಬಲ ಸೂಚಿಸಿರುವ ಜೆಡಿಎಸ್‍ನವರು ಮಾತಿಗೆ ತಪ್ಪುವುದರಲ್ಲಿ ಮೊದಲನೆ ಸ್ಥಾನ ಪಡೆದಿದ್ದಾರೆ. ನಮ್ಮೊಂದಿಗೆ ನಿನ್ನೆ ಬಂದು ರೈತರಿಗೆ ಬೆಂಬಲ ಸೂಚಿಸಿ, ಸದನಕ್ಕೆ ಹೋಗಿ ಮಸೂದೆಗೆ ಮತ ಹಾಕಿದ್ದಾರೆ. ಇದರ ಹಿಂದೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ಬ್ರಹ್ಮಾಂಡ ಭ್ರಷ್ಟಾಚಾರ ಇದೆ ಎಂದು ದೂರಿದರು.
ಮತ್ತೋರ್ವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಇರುವುದು ಒಂದೇ ಸರಕಾರ. ರೈತರಿಗೆ ಕಿಸಾನ್ ಸಮ್ಮಾನ್ ಎಂಬ ಯೋಜನೆಯ ಎರಡು ಸಾವಿರ ರೂಪಾಯಿ ಭಿಕ್ಷೆಯ ಹಣ ಕೊಟ್ಟಿದ್ದಾರೆ. ಆದರೆ, ಬಂಡವಾಳಶಾಹಿಗಳಿಗೆ ಕೋಟಿ ಕೋಟಿ ಹಣವನ್ನು ನೀಡಿದ್ದಾರೆ ಎಂದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಕರ್ನಾಟಕದಲ್ಲಿ ಇರುವಂತಹ ಭೂಹೀನ ರೈತರಿಗೆ ಈ ಕಾಯ್ದೆಯಿಂದ ಒಂದಿಂಚೂ ಭೂಮಿ ಸಿಗುವುದಿಲ್ಲ, ಭೂ ಮಾಫಿಯಾವನ್ನು ಮೆಚ್ಚಿಸಲು ಯಡಿಯೂರಪ್ಪ ಈ ಮಸೂದೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಸಂಸದ ಎಲ್.ಹನುಮಂತಯ್ಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು
ನಾವು ಜೊತೆಯಾಗಿ ನಿಲ್ಲಬೇಕು
ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಸೂದೆಗಳನ್ನು ಅಂಗೀಕಾರ ಮಾಡುವೆ, ಆದರೆ, ನಾವು ಜೊತೆಯಾಗಿ ನಿಂತು ತೀವ್ರ ಹೋರಾಟ ನಡೆಸಿದರೆ, ಇವುಗಳನ್ನು ವಾಪಸ್ಸು ಪಡೆಯುತ್ತಾರೆ.
-ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ







