ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ, ವಿದ್ಯುತ್ ವಿಧೇಯಕ ರದ್ದು ಪ್ರಸ್ತಾವನೆಯಲ್ಲಿ ರೈತರಿಗೆ ಕೇಂದ್ರದ ಭರವಸೆ
ಹೊಸದಿಲ್ಲಿ, ಡಿ.9: ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನಾ ನಿರತ ರೈತರ ಪ್ರತಿನಿಧಿಗಳ ಜೊತೆ ಕೇಂದ್ರ ಸಚಿವ ಅಮಿತ್ ಶಾ ಅವರು ಮಂಗಳವಾರ ನಡೆಸಿದ ಮಾತುಕತೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಧವಾರ ಕೇಂದ್ರ ಸರಕಾರವು ಪ್ರತಿಭಟನಕಾರರಿಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.
ನೂತನ ಕೃಷಿ ಕಾಯ್ದೆಗೆ ಮಾಡಲು ಉದ್ದೇಶಿಸಿರುವ ತಿದ್ದುಪಡಿಗಳ ಕುರಿತ ಲಿಖಿತ ವಿವರಗಳು ಪ್ರಸ್ತಾವನೆಯಲ್ಲಿ ಒಳಗೊಂಡಿವೆ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದೆಂದು ಸರಕಾರವು ಭರವಸೆ ನೀಡಿದೆ. 2020ರ ವಿದ್ಯುತ್ (ತಿದ್ದುಪಡಿ) ವಿಧೇಯಕವನ್ನು ಜಾರಿಗೊಳಿಸಲಾಗುವುದಿಲ್ಲವೆಂದು ಅದು ತಿಳಿಸಿದೆ. ವಿದ್ಯುತ್ ವಿಧೇಯಕದ ವಿರುದ್ಧ ಪ್ರತಿಭಟನಾ ನಿರತ ರೈತರು ತೀವ್ರ ಆಕ್ಷೇಪ ವನ್ನು ವ್ಯಕ್ತಪಡಿಸಿದ್ದರು. ಆದರೆ ಸರಕಾರವು ಇದಕ್ಕೂ ಮುನ್ನ ವಿದ್ಯುತ್ ವಿತರಣೆಗಾರರ ಮೇಲೆ ಕಣ್ಗಾವಲಿರಿಸಲು ಈ ವಿಧೇಯಕವು ಅಗತ್ಯವಾಗಿದೆ ಎಂದು ವಾದಿಸಿತ್ತು.
ಬೃಹತ್ ಕಾರ್ಪೊರೇಟ್ ಕಂಪೆನಿಗಳು ಕೃಷಿ ಜಮೀನನ್ನು ಖರೀದಿಸಬಹುದೆಂಬ ರೈತರ ಆತಂಕವನ್ನು ನಿವಾರಿಸುವುದಕ್ಕಾಗಿ, ಯಾವುದೇ ಖರೀದಿದಾರನು ಕೃಷಿ ಜಮೀನಿನ ಮೇಲೆ ಸಾಲವನ್ನು ಪಡೆಯಲು ಸಾಧ್ಯವಿಲ್ಲವೆಂದು ತಿಳಿಸಿದೆ.
ಮಂಡಿಗಳ ಹೊರಗೆ ವ್ಯಾಪಾರ ನಡೆಸುವ ವ್ಯಾಪಾರಿಗಳನ್ನು ರಾಜ್ಯ ಸರಕಾರಗಳು ನೋಂದಣಿ ಮಾಡಲು ಕಾನೂನಿನಲ್ಲಿ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಸರಕಾರ ಪ್ರಸ್ತಾವನೆಯಲ್ಲಿ ತಿಳಿಸಿದೆ.







