ಕುಮಾರಸ್ವಾಮಿಯ ಮುಂದೆ ಇನ್ನೊಂದು ಪರೀಕ್ಷೆ
ಮಾನ್ಯರೇ,
ಬಿಜೆಪಿಯ ಜೊತೆಗೆ ಮೈತ್ರಿ ಮಾಡಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ‘ಜಾತ್ಯತೀತ’ ಶಬ್ದದ ಅರ್ಥ ನನಗೆ ಗೊತ್ತಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಮೈತ್ರಿ ಕಡಿದ ಬಳಿಕ, ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಪಶ್ಚಾತ್ತಾಪವನ್ನೂ ಪಟ್ಟಿದ್ದರು. ಪದೇ ಪದೇ ಕಣ್ಣೀರನ್ನೂ ಸುರಿಸಿದ್ದರು. ‘‘ಮಾಡಿದ ತಪ್ಪಿಗೆ ಕ್ಷಮೆ ನೀಡಿ’’ ಎಂದು ಜಾತ್ಯತೀತರನ್ನು ಕೇಳಿಕೊಂಡಿದ್ದರು. ಆದರೆ ಮಂಗಳವಾರ ರೈತ ವಿರೋಧಿ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರಲು ಬಿಜೆಪಿಯೊಂದಿಗೆ ಯಾವುದೇ ಸಂಕೋಚವಿಲ್ಲದೆ ಕೈ ಜೋಡಿಸಿದರು. ದೇವೇಗೌಡರ ಮಣ್ಣಿನ ಮಗ ಎನ್ನುವ ಬಿರುದನ್ನೇ ಮಣ್ಣು ಪಾಲು ಮಾಡಿದರು. ಇನ್ನು ಗೋಹತ್ಯೆ ನಿಷೇಧ ಕಾನೂನಿನ ಸರದಿ.
ಇದು ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ಕಾನೂನು ಮಾತ್ರವಲ್ಲ. ಗೋವುಗಳನ್ನು ಸಾಕುತ್ತಿರುವ ರೈತರ ವಿರೋಧಿಯೂ ಆಗಿದೆ. ಗೋಹತ್ಯೆಯ ವಿರುದ್ಧ ಕಾನೂನು ಜಾರಿಯಾದರೆ ಅದರ ನೇರ ಸಂತ್ರಸ್ತರು ರೈತರು. ಆ ಬಳಿಕ ಗೋಮಾಂಸಾಹಾರಿಗಳು. ಅವರಲ್ಲಿ ದಲಿತರು, ಮುಸ್ಲಿಮರು, ಕ್ರೈಸ್ತರೂ ಸೇರಿದ್ದಾರೆ. ಹಾಗೆಯೇ ದೊಡ್ಡ ಸಂಖ್ಯೆಯ ಹಿಂದೂಗಳೂ ಗೋಮಾಂಸಾಹಾರಿಗಳೇ. ಬಿಜೆಪಿ, ಕೇವಲ ವೈದಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕಾನೂನು ತರಲು ಹೊರಟಿದೆ. ಜೆಡಿಎಸ್ ಬೆಂಬಲವಿಲ್ಲದೆ ಈ ಕಾನೂನು ವಿಧಾನ ಪರಿಷತ್‌ನಲ್ಲಿ ಪಾಸಾಗಲು ಸಾಧ್ಯವಿಲ್ಲ. ಬಿಜೆಪಿಯೊಂದಿಗೆ ಅನೈತಿಕ ಸಂಬಂಧವನ್ನು ಈಗಾಗಲೇ ಘೋಷಿಸಿಕೊಂಡಿರುವ ಕುಮಾರಸ್ವಾಮಿ, ಕಟ್ಟ ಕಡೆಯ ಅಸಲಿಯತ್ತಿನ ಪರೀಕ್ಷೆಯಿದು. ಗೋಹತ್ಯೆ ಕಾನೂನಿಗೆ ಕುಮಾರ ಸ್ವಾಮಿ ಯಾವುದೇ ರೀತಿಯಲ್ಲಿ ಬೆಂಬಲಿಸಿದರೆ ಅಥವಾ ಅದು ಪಾಸಾಗಲು ಬೇಕಾದ ತಂತ್ರಗಳ ಜೊತೆಗೆ ಭಾಗಿಯಾದರೆ, ಶಾಶ್ವತವಾಗಿ ಅವರು ನಾಶವಾಗಲಿದ್ದಾರೆ. ಲಜ್ಜಗೇಡಿತನದ ಪರಮಾವಧಿಯ ರಾಜಕೀಯಕ್ಕಾಗಿ ಶಾಶ್ವತವಾಗಿ ಗುರುತಿಸಲ್ಪಡಲಿದ್ದಾರೆ.







