ಹಿಂದುತ್ವದ ಹೆಸರಿನಲ್ಲಿ ಮೂಲನಿವಾಸಿಗಳ ಆಹಾರ ಸ್ವಾತಂತ್ರ್ಯ ಕಸಿಯುವ ಹುನ್ನಾರ: ಪ್ರೊ.ಮಹೇಶ್ ಚಂದ್ರಗುರು

ಮೈಸೂರು,ಡಿ.9: ಮೂಲನಿವಾಸಿಗಳ ಆಹಾರ ಸ್ವಾತಂತ್ರ್ಯವನ್ನು ಹಿಂದುತ್ವದ ಹೆಸರಿನಲ್ಲಿ ಕಸಿದುಕೊಳ್ಳಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಅಂಗೀಕರಿಸಿರುವ ರಾಜ್ಯ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿ ಬುಧವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಮಾಡಿರುವ ತಿದ್ದುಪಡಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಆಹಾರ ಸ್ವಾತಂತ್ರ್ಯವನ್ನು ಕಸಿಯುವ ಹುನ್ನಾರ ಎಂದು ಕಿಡಿಕಾರಿದರು.
ಗೋಮಾಂಸ ಸೇವನೆ ವಿಷಯದಲ್ಲಿ ಈಗಾಗಲೇ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ಪ್ರಜೆಗಳ ಸ್ವಾತಂತ್ರ್ಯದ ವಿಷಯದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಕೂಡದೂ ಎಂಬ ಸ್ಪಷ್ಟ ನಿರ್ದೇಶನ ನೀಡಿದ್ದರೂ ಬಿಜೆಪಿ ಸರ್ಕಾರ ಇರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಇಂತಹ ಆಹಾರ ಸ್ವಾತಂತ್ರ್ಯ ಕಸಿಯುವ ಪ್ರಯತ್ನ ಮಾಡುತ್ತಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಜರಿದರು.
ಭಾರತೀಯ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಕೂಡ ಮೂಲಭೂತ ಆಹಾರ ಸ್ವಾಂತಂತ್ರ್ಯವನ್ನು ನೀಡಿದೆ. ಸಸ್ಯಹಾರ ಮತ್ತು ಮಾಂಸಹಾರ ಸೇವನೆ ಪ್ರಜೆಗಳ ಇಚ್ಚೆಗೆ ಬಿಟ್ಟ ವಿಚಾರ. ಪ್ರಜೆಗಳ ಆಹಾರ ಸ್ವಾತಂತ್ರ್ಯದ ವಿಷಯದಲ್ಲಿ ಸರ್ಕಾರ ಧರ್ಮ ಅಥವಾ ಸಂಪ್ರದಾಯದ ಹೆಸರಿನಲ್ಲಿ ಹಸ್ತಕ್ಷೇಪ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ವೈದಿಕಶಾಹಿಗಳು ಸಾವಿರಾರು ವರ್ಷಗಳ ಹಿಂದೆ ಹೋಮ ಹವನಗಳ ಹೆಸರಿನಲ್ಲಿ ಗೋಮಾಂಸ ಸೇವನೆಯನ್ನು ಆರಂಭಿಸಿದೆ. ಈ ಹಿಂದೆ ವೈದಿಕರು ಮತ್ತು ಬ್ರಾಹ್ಮಣರೂ ಕೂಡ ಗೋಮಾಂಸ ಸೇವನೆ ಮಾಡುತ್ತಿದ್ದರು ಎಂಬುದಕ್ಕೆ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಹಲವಾರು ಉಲ್ಲೇಖಗಳಿವೆ. ವಿದೇಶಗಳಲ್ಲಿ ಗೋಮಾಂಸ ಹಂದಿ ಮಾಂಸ ಕೋಳಿ ಮೊದಲಾದವುಗಳನ್ನು ಸೇವಿಸುವುದು ಅತ್ಯಂತ ಸಹಜವಾಗಿದೆ. ಭಾರತದ ಪ್ರತಿಷ್ಠಿತ ಗೋಮಾಂಸ ರಫ್ತು ಮಾಡುವ ಸಂಸ್ಥೆಗಳು ವೈದಿಕರ ಒಡೆತನ ಮತ್ತು ನಿಯಂತ್ರಣದಲ್ಲಿವೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯನ್ನು ಆಧರಿಸಿದ ರಿಟ್ ಅರ್ಜಿಯನ್ನು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿ ಈ ತಿದ್ದುಪಡಿಯನ್ನು ಸಮಾನ ಮನಸ್ಕರು ರದ್ಧುಪಡಿಸುವುದು ಸೂಕ್ತ ಎಂದು ಹೇಳಿದರು.







