ರೈತರ ಪ್ರತಿಭಟನೆಯನ್ನು ಭಾರತ-ಪಾಕ್ ಸಂಘರ್ಷ ಎಂದು ತಪ್ಪಾಗಿ ಅರ್ಥೈಸಿಕೊಂಡು ವಿವಾದಕ್ಕೀಡಾದ ಬ್ರಿಟಿಷ್ ಪ್ರಧಾನಿ

ಲಂಡನ್ : ಭಾರತ ಸರಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವೆಂದು ತಪ್ಪಾಗಿ ಅರ್ಥೈಸಿಕೊಂಡು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ವಿವಾದಕ್ಕೀಡಾಗಿದ್ದಾರೆ.
ಇಂಗ್ಲೆಂಡ್ ಸಂಸತ್ತಿನಲ್ಲಿ ಪ್ರಶ್ನೆ ಅವಧಿಯಲ್ಲಿ ಸಂಸದ ತನ್ಮನ್‍ಜೀತ್ ಸಿಂಗ್ ಧೇಸಿ ಅವರು ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸುವಂತೆ ಹೇಳಿದಾಗ ಜಾನ್ಸನ್ ಅವರು ಉತ್ತರಿಸಿ ''ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ವಿಚಾರಗಳ ಕುರಿತು ನಮಗೆ ತೀರಾ ಕಳವಳವಿದೆ ಹಾಗೂ ಈ ವಿಚಾರಗಳು ಎರಡೂ ಸರಕಾರಗಳು ಇತ್ಯರ್ಥಪಡಿಸಿಕೊಳ್ಳಬೇಕಿದೆ'' ಎಂದರು.
ಪ್ರಧಾನಿಯ ಉತ್ತರದಿಂದ ಗೊಂದಲಕ್ಕೀಡಾದ ತನ್ಮನ್‍ಜೀತ್ ನಂತರ ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ ''ಪ್ರಧಾನಿಗೆ ತಾವು ಮಾತನಾಡುತ್ತಿರುವುದೇನು ಎಂಬುದರ ಅರಿವಿದ್ದರೆ ಒಳ್ಳೆಯದಿತ್ತು. ಜಗತ್ತು ಗಮನಿಸುತ್ತಿದೆ. ಸಾವಿರಾರು ರೈತರು ಪ್ರತಿಭಟಿಸುತ್ತಿದ್ದಾರೆ ಹಾಗೂ ಬೋರಿಸ್ ಜಾನ್ಸನ್ ಅವರ ಇಂತಹ ಹೇಳಿಕೆ ನಮ್ಮ ದೇಶಕ್ಕೆ ಮತ್ತಷ್ಟು ಮುಜುಗರ ಸೃಷ್ಟಿಸಿದೆ'' ಎಂದು ಹೇಳಿದ್ದಾರೆ.
''ಪ್ರಧಾನಿ ಇಂದು ಸಂಸತ್ತಿನಲ್ಲಿ ಪ್ರಶ್ನೆಯನ್ನು ತಪ್ಪಾಗಿ ಕೇಳಿಕೊಂಡರು. ನಮ್ಮ ವಿದೇಶಾಂಗ ಕಚೇರಿ ಭಾರತದಲ್ಲಿ ನಡೆಯುತ್ತಿರುವುದನ್ನು ನಿಕಟವಾಗಿ ಪರಿಶೀಲಿಸುತ್ತಿದೆ'' ಎಂದು ನಂತರ ಸರಕಾರದ ವಕ್ತಾರರೊಬ್ಬರು ಸಮಜಾಯಿಷಿ ನೀಡಿದ್ದಾರೆ.







