ಐತಿಹಾಸಿಕ ರೈತ ಹೋರಾಟದ ಮುಂಚೂಣಿ ನಾಯಕ ಹನ್ನಾನ್ ಮುಲ್ಲಾ

ಕೋಲ್ಕತ್ತಾ : ಮಂಗಳವಾರ ಸಂಜೆ ಕೆಲ ರೈತ ಮುಖಂಡರು ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಡುವೆ ಮಾತುಕತೆಗಳು ವಿಫಲವಾದ ನಂತರ ಆ ಕುರಿತು ಪತ್ರಕರ್ತರಿಗೆ ಕಡ್ಡಿ ಮುರಿದಂತೆ ಪ್ರತಿಕ್ರಿಯಿಸಿದ್ದ ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯ ಹಾಗೂ ಆಲ್ ಇಂಡಿಯಾ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ, 76 ವರ್ಷದ ಹನ್ನಾನ್ ಮುಲ್ಲಾ ಎಲ್ಲರ ಗಮನ ಸೆಳೆದಿದ್ದರು. ''ಏನಿಲ್ಲ, ಕೋಳಿ ಕುಳಿತಿದ್ದರೂ ಮೊಟ್ಟೆ ಇಡಲೇ ಇಲ್ಲ'' ಎಂದು ಅವರು ಹೇಳಿದ್ದರು.
ಅಷ್ಟಕ್ಕೂ ಮುಲ್ಲಾ ಅವರು ರೈತ ಆಂದೋಲನಕ್ಕೆ ಹೊಸಬರೇನಲ್ಲ. ಆದರೆ 2009ರಿಂದ ತೀರಾ ಇತ್ತೀಚಿಗಿನ ತನಕ ಅಷ್ಟೊಂದು ಸಕ್ರಿಯರಾಗಿಲ್ಲದೇ ಇದ್ದ ಮುಲ್ಲಾ ಅವರು ಪಶ್ಚಿಮ ಬಂಗಾಳದ ಉಲುಬೇರಿಯಾ ಲೋಕಸಭಾ ಕ್ಷೇತ್ರದಿಂದ ಎಂಟು ಬಾರಿ ಸಂಸದರಾಗಿ ಆಯ್ಕೆಯಾದವರು ಹಾಗೂ ದೇಶದ ವಿವಿಧೆಡೆಗಳಲ್ಲಿ ರೈತರ ಚಳುವಳಿಗೆ ಪುನಶ್ಚೇತನ ನೀಡಿದವರೆಂದೇ ಹೆಸರಾದವರು. 2018ರಲ್ಲಿ ಅವರು ಪಶ್ಚಿಮ ಬಂಗಾಳದಲ್ಲಿ ಕಿಸಾನ್ ಲಾಂಗ್ ಮಾರ್ಚ್ ಸಂಘಟಿಸಿದ್ದರು. ಇದೀಗ ಅವರು ದಿಲ್ಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಹನ್ನಾನ್ ಮುಲ್ಲಾ ಅವರ ರಾಜಕೀಯ ಹಿನ್ನೆಲೆಯ ಹೊರತಾಗಿಯೂ ಪ್ರತಿಭಟನಾನಿರತ ರೈತರು ಅವರನ್ನು ಸ್ವೀಕರಿಸಿದ್ದಾರೆ. ``ಭೂಸ್ವಾಧೀನ ಮಸೂದೆಯ ವಿರುದ್ಧದ ಹೋರಾಟ, ಮಂಡ್ಸೌರ್ ಹೋರಾಟ ಹಾಗೂ ಈಗಿನ ರೈತರ ಪ್ರತಿಭಟನೆಗಳು, ಈ ಆಂದೋಲನಗಳನ್ನು ವ್ಯಾಪಕಗೊಳಿಸುವಲ್ಲಿ ಹನ್ನಾನ್ ಮುಲ್ಲಾ ಸಹಾಯ ಮಾಡಿದ್ದಾರೆ'' ಎಂದು ಕಿಸಾನ್ ಸಭಾ ರೋಹ್ಟಕ್ ಕಾರ್ಯದರ್ಶಿ ಸುರೀಂದರ್ ಸಿಂಗ್ ಹೇಳುತ್ತಾರೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸೆಣಬು ಮಿಲ್ ಕಾರ್ಮಿಕರೊಬ್ಬರ ಪುತ್ರರಾಗಿರುವ ಹನ್ನಾನ್ ಅವರು 60ರ ದಶಕದಲ್ಲಿ ಸಿಪಿಎಂ ಸೇರಿದ್ದರು. ಹೌರಾದ ಚೆಂಗೈಲ್ ಎಂಬಲ್ಲಿನ ಮದರಸಾದಲ್ಲಿ ತಮ್ಮ ಆರಂಭಿಕ ಶಿಕ್ಷಣ ಪಡೆದ ಅವರು ಈಗ ವಿಶ್ವವಿದ್ಯಾಲಯವಾಗಿರುವ ಕೋಲ್ಕತ್ತಾದ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. 1980ರಲ್ಲಿ ಸಿಪಿಎಂ ರಾಜ್ಯ ಸಮಿತಿಗೆ ಸೇರ್ಪಡೆಗೊಂಡ ಅವರು ಮೂರು ದಶಕಗಳ ನಂತರ 2015ರಲ್ಲಿ ಪಾಲಿಟ್ ಬ್ಯುರೋ ಭಾಗವಾದರು. 1980ರಿಂದ 2009ರ ತನಕ ಅವರು ಉಲುಬೇರಿಯಾ ಸಂಸತ್ ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿದ್ದಾರೆ. ಆದರೆ 2009ರ ಚುನಾವಣೆ ಸೋತ ನಂತರ ಅವರು ರಾಜಕೀಯ ಚಟುವಟಿಕೆಗಳಿಂದ ದೂರ ಸರಿದಿದ್ದರು. ಸಿಂಗೂರ್‍ನಲ್ಲಿ 2008ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕುರಿತಂತೆ ಪಕ್ಷದ ನಿಲುವಿನಿಂದ ಅವರು ಬೇಸತ್ತಿದ್ದರು.
ಈಗ ಅವರು ಹೆಚ್ಚಾಗಿ ಆಲ್ ಇಂಡಿಯಾ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿಯಾಗಿಯೇ ಪರಿಚಿತರು. ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ನಿಕಟವರ್ತಿಯೂ ಆಗಿದ್ದಾರೆ.







