ಸಿಂಧೂ ನಾಗರಿಕತೆಯ ಜನರು ಹೆಚ್ಚಾಗಿ ಮಾಂಸ ಸೇವಿಸುತ್ತಿದ್ದರು: ಹೊಸ ಅಧ್ಯಯನದಿಂದ ಬಹಿರಂಗ

ಅಕ್ಷ್ಯೇತಾ ಸೂರ್ಯನಾರಾಯಣ್
ಹೊಸದಿಲ್ಲಿ : ಭಾರತದ ಅತಿ ಪ್ರಾಚೀನ ನಾಗರಿಕತೆಯಾಗಿರುವ ಸಿಂಧೂ ನಾಗರಿಕತೆಯ ಕಾಲದ ಜನರ ಆಹಾರ ಪದ್ಧತಿಯಲ್ಲಿ ಮಾಂಸ ಪ್ರಮುಖವಾಗಿತ್ತು ಹಾಗೂ ಅವರು ಹೆಚ್ಚಾಗಿ ಬೀಫ್ ಸೇವನೆ ಮಾಡುತ್ತಿದ್ದರು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿಎಚ್ಡಿ ಪ್ರಬಂಧಕ್ಕಾಗಿ ಅಕ್ಷ್ಯೇತಾ ಸೂರ್ಯನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಅಧ್ಯಯನದಿಂದ ತಿಳಿದು ಬಂದಿದೆ.
``ಲಿಪಿಡ್ ರೆಸಿಡ್ಯೂಸ್ ಇನ್ ಪಾಟರಿ ಫ್ರಮ್ ದಿ ಇಂಡಸ್ ಸಿವಿಲೈಸೇಶನ್ ಇನ್ ನಾರ್ತ್ ವೆಸ್ಟ್ ಇಂಡಿಯಾ'' ಎಂಬ ಶೀರ್ಷಿಕೆಯ ಈ ಅಧ್ಯಯನ `ಜರ್ನಲ್ ಆಫ್ ಆರ್ಕಿಯಲಾಜಿಕಲ್ ಸಾಯನ್ಸ್'ನಲ್ಲಿ ಬುಧವಾರ ಪ್ರಕಟಗೊಂಡಿದೆ.
ಹರ್ಯಾಣದ ಹರಪ್ಪನ್ ತಾಣಗಳಲ್ಲಿ ಕಂಡು ಬಂದ ಮಡಕೆಯ ವಸ್ತುಗಳ ಲಿಪಿಡ್ ರೆಸಿಡ್ಯೂ ಅನಾಲಿಸಿಸ್ ಆಧರಿಸಿ ಸಿಂಧೂ ನಾಗರಿಕತೆಯ ಜನರ ಆಹಾರ ಪದ್ಧತಿಯನ್ನು ಅಧ್ಯಯನ ನಡೆಸಲಾಗಿತ್ತು.
ಸಿಂಧೂ ನಾಗರಿಕತೆಯ ಜನರು ಹಂದಿ, ದನ, ಎಮ್ಮೆ, ಕುರಿ ಮತ್ತು ಆಡಿನ ಮಾಂಸ ಸೇವಿಸುತ್ತಿದ್ದರು, ಹೈನು ಉತ್ಪನ್ನಗಳನ್ನೂ ಬಳಸುತ್ತಿದ್ದರು ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಅಕ್ಷ್ಯೇತಾ ಅವರ ಪಿಎಚ್ಡಿ ಪ್ರಬಂಧದ ಹೆಸರು ``ವಾಟ್ಸ್ ಕುಕಿಂಗ್ ಇನ್ ದಿ ಇಂಡಸ್ ಸಿವಿಲೈಸೇಶನ್? ಇನ್ವೆಸ್ಟಿಗೇಟಿಂಗ್ ಇಂಡಸ್ ಫುಡ್ ಥ್ರೂ ಲಿಪಿಡ್ ರೆಸಿಡ್ಯೂ ಅನಾಲಿಸಿಸ್,'' ಎಂಬುದಾಗಿತ್ತು.
``ಸಾಕು ಪ್ರಾಣಿಗಳ ಪೈಕಿ ಆಕಳು/ಎಮ್ಮೆ ಮಾಂಸವನ್ನು ಶೇ 50ರಿಂದ ಶೇ 60ರಷ್ಟು ಜನರು ತಿನ್ನುತ್ತಿದ್ದರೆ ಶೇ 10ರಷ್ಟು ಮಂದಿ ಆಡು/ಕುರಿ ಮಾಂಸ ತಿನ್ನುತ್ತಿದ್ದ ಸಾಧ್ಯತೆಯಿದೆ. ಈ ಅಧ್ಯಯನ ವಿಶಿಷ್ಟವಾಗಿದೆ. ಲಿಪಿಡ್ ರೆಸಿಡ್ಯೂ ಅನಾಲಿಸಿಸ್ ಮೂಲಕ ಆ ಕಾಲದ ಪಾತ್ರೆಗಳಲ್ಲಿನ ಪಳೆಯುಳಿಕೆಗಳನ್ನು ಆಧರಿಸಿ ಅವರು ದನ, ಆಡು, ಕುರಿ ಹಾಗೂ ಹಂದಿ ಮಾಂಸ ಮುಖ್ಯವಾಗಿ ಗೋಮಾಂಸ ಭಕ್ಷಿಸುತ್ತಿದ್ದರು ಎಂದು ಹೇಳಬಹುದು,'' ಎಂದು 29 ವರ್ಷದ ಲೀಡ್ ಲೇಖಕಿ ಅಕ್ಷ್ಯೇತಾ ಹೇಳಿದ್ದಾರೆ.
ತಮ್ಮ ಪಿಎಚ್ಡಿ ಫೆಬ್ರವರಿ ತಿಂಗಳಲ್ಲಿ ಪೂರ್ಣಗೊಳಿಸಿರುವ ಅವರು ಈಗ ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.







