ನಾವು ಅಧಿಕಾರಕ್ಕೆ ಬಂದರೆ, ರೈತ ವಿರೋಧಿ ಕಾಯ್ದೆಗಳನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ

ಬೆಂಗಳೂರು, ಡಿ.10: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ ಸೇರಿದಂತೆ ಇನ್ನಿತರೆ ರೈತ ವಿರೋಧಿ ಕಾಯ್ದೆಗಳನ್ನು ಕಿತ್ತೆಸೆಯುವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಗುರುವಾರ ಇಲ್ಲಿನ ವಿಧಾನಸೌಧದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ಕಾಲ್ನಡಿಗೆ ಜಾಥಾ ನಡೆಸಿದ ಅವರು, ಬಳಿಕ ರೈತರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಯಾವುದೇ ರೀತಿಯ ಚರ್ಚೆಗಳು ಇಲ್ಲದೆ, ಏಕಾಏಕಿ ಭೂಸುಧಾರಣಾ, ಎಪಿಎಂಸಿ, ಕಾರ್ಮಿಕ ಹಾಗೂ ಅಗತ್ಯ ವಸ್ತುಗಳ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಇದರಿಂದ ರೈತ ವರ್ಗಕ್ಕೆ ಅನ್ಯಾಯವಾಗಿದ್ದು, ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಈ ರೀತಿಯ ಕಾರ್ಪೋರೇಟ್ ಕಾಯ್ದೆಗಳನ್ನು ಕಿತ್ತೆಸೆಯುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಸೂಚನೆ ಪಾಲನೆ ಮಾಡುವ ಗುಲಾಮರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಇದರಿಂದ ರೈತನಿಗೆ ಅನ್ಯಾಯವೇ ಹೆಚ್ಚಿದೆ. ಅಲ್ಲದೆ, ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎಪಿಎಂಸಿ ಮಾರುಕಟ್ಟೆ ರದ್ದುಗೊಳಿಸಲು ಇದು ಸಕಾಲ ಎಂದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ ಎಂದು ನುಡಿದರು.
ಸದ್ಯ ನಾವೆಲ್ಲಾ ರೈತರ ಮಕ್ಕಳು. ಇದನ್ನು ನಾನು ಹೆಮ್ಮೆಯಿಂದ ಹೇಳಲು ಇಷ್ಟವಿದೆ. ಅಲ್ಲದೆ, ಮೂರು ವರ್ಷ ರೈತ ಸಂಘಟನೆಯಲ್ಲಿ ಸಕ್ರಿಯನಾಗಿದ್ದೆ ಎಂದ ಅವರು, ನಾವು ನಿಮ್ಮ ಹೋರಾಟಕ್ಕೆ ಬೆಂಬಲ ಕೊಡಲು ಬಂದಿದ್ದೇವೆ. ಹಿಂದಿನ ಹೋರಾಟದಲ್ಲೂ ನಾನು ಭಾಗಿಯಾಗಿದ್ದೆ ಎಂದರು.
ಎಚ್‍ಡಿಕೆ ವಿರುದ್ಧ ವಾಗ್ದಾಳಿ: ಮಣ್ಣಿನ ಮಕ್ಕಳು, ರೈತರ ಮಕ್ಕಳು ಎಂದು ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ನಾವು ಯಾರ ಮಕ್ಕಳು. ಯಾರೇ ಆಗಲಿ ನಾಲಿಗೆ ಒಂದೇ ಇರಬೇಕು. ಒಂದು ತರಹ ಇರಬೇಕು, ಎರಡು ರೀತಿ ಇರಬಾರದು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ಡಾ.ಜಿ.ಪರಮೇಶ್ವರ್, ರಮೇಶ್ ಕುಮಾರ್, ದಿನೇಶ್ ಗುಂಡೂರಾವ್, ಯು.ಟಿ.ಖಾದರ್, ಝಮೀರ್ ಅಹ್ಮದ್ ಖಾನ್, ಬೈರತಿ ಸುರೇಶ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
'ಕುಮಾರಸ್ವಾಮಿ ಬಳಿ ಬೇನಾಮಿ ಜಮೀನು ಇದೆ'
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿ ಬೇನಾಮಿ ಜಮೀನು ಇದೆ. ಹಾಗಾಗಿಯೇ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿರಬೇಕು. ಅಲ್ಲದೆ, ಇದರ ತಿದ್ದುಪಡಿಯಿಂದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಾಗಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿಯೇ ಸಾವಿರಾರು ಕೋಟಿ ಲೂಟಿ ಮಾಡಲಿದ್ದು, ಸರಕಾರವೂ ಕೈಜೋಡಿಸಿದೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಕಾಯ್ದೆ ಪ್ರತಿಗೆ ಬೆಂಕಿ ಹಚ್ಚಿದ ಸಿದ್ದರಾಮಯ್ಯ
ರೈತರು ಕರೆ ನೀಡಿದ್ದ ರಾಜಭವನ ಮುತ್ತಿಗೆ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.







