ಶಿಥಿಲಗೊಂಡ ಹಳೆ ಕಟ್ಟಡ ತೆರವಿಗೆ ಆಗ್ರಹ !

ಉಡುಪಿ, ಡಿ.10: ಪರ್ಕಳ ಬಸ್‌ನಿಲ್ದಾಣದ ಪಕ್ಕದಲ್ಲೇ ಸುಮಾರು ಎಪ್ಪತ್ತು- ಎಂಭತ್ತು ವರ್ಷಗಳಷ್ಟು ಹಳೆಯದಾದ ಕಟ್ಟಡವು ಶಿಥಿಲಗೊಂಡಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈ ಕಟ್ಟಡದ ಹಿಂಭಾಗದ ಹೆಚ್ಚಿನೆಲ್ಲಾ ಭಾಗಗಳು ಕುಸಿದಿದ್ದು ನೆಲ ಸಮವಾಗಿದೆ.
ಈಗ ರಾಷ್ಟ್ರೀಯ ಹೆದ್ದಾರಿಯಾಗಿರುವ ಪರ್ಕಳದ ಕೇಂದ್ರ ಸ್ಥಾನದಲ್ಲೇ ರಸ್ತೆ ಪಕ್ಕದಲ್ಲೇ ಒಂದು ಅಂತಸ್ತಿನ ಈ ಕಟ್ಟಡ ನಿಂತಿದೆ. ಎಲ್ಲಾ ಕಡೆಗಳಲ್ಲಿ ಗಿಡಗಂಟೆ ಗಳು ಬೆಳೆದು ನಿಂತಿವೆ. ಈ ಕಟ್ಟಡದಲ್ಲಿ ಹಿಂದೆ ಇದ್ದ ಎಲ್ಲಾ ಅಂಗಡಿಗಳು ಇದೀಗ ಮುಚ್ಚಿವೆ. ಈ ಕಟ್ಟಡ ಸಂಪೂರ್ಣ ನಿರ್ಜನ ವಾಗಿರುವುದರಿಂದ ಕೂಡಲೇ ನಗರಸಭೆ ಇದನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರಸಭೆಯ ವ್ಯಾಪ್ತಿಗೆ ಒಳಪಟ್ಟ, ರಾಷ್ಟ್ರೀಯ ಹೆದ್ದಾರಿ 169 ಎ ಮಗ್ಗುಲಲ್ಲಿ ಈ ಕಟ್ಟಡ ಇರುವುದರಿಂದ ಹಾಗೂ ನಿರಂತರವಾಗಿ ವಾಹನಗಳ ಓಡಾಟ ಇಲ್ಲಿ ಇರುವುದರಿಂದ ಉಡುಪಿಯಲ್ಲಿ ನಡೆದ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆಯು ಕಟ್ಟಡದ ಮಾಲಕರಿಗೆ ಕೂಡಲೇ ಕಟ್ಟಡವನ್ನು ತೆರವುಗೊಳಿಸುವಂತೆ ನೋಟೀಸು ನೀಡಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ನಗರಸಭೆಯನ್ನು ಆಗ್ರಹಿಸಿದ್ದಾರೆ








