ಮಲ್ಪೆ: ಅಂಬೇಡ್ಕರ್ 64ನೇ ಪರಿನಿಬ್ಬಾಣ ದಿನಾಚರಣೆ

ಮಲ್ಪೆ, ಡಿ.10: ಮಹಾನ್ ನಾಯಕ, ಸಂವಿಧಾನ ಶಿಲ್ಪಿ ಮಾನವತಾವಾದಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ 64ನೇ ಮಹಾ ಪರಿನಿಬ್ಬಾಣ ದಿನದ ಪ್ರಯುಕ್ತ ಮಲ್ಪೆ ತೊಟ್ಟಂನ ಕೀರ್ತಿಶಾಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾ ಸಂಘದ ಇದರ ವತಿಯಿಂದ ತೊಟ್ಟಂ ಶ್ರೀ ಗಣೇಶೋತ್ಸವ ವೇದಿಕೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತೊಟ್ಟಂ, ಸಂಕಲ್ಪಗಳಿಲ್ಲದ ಯಾವ ದಿನಾಚರಣೆಗಳು ಕೂಡ ಮುಂದಿನ ಪೀಳಿಗೆಯಲ್ಲಿ ಬದುಕನ್ನು ಕಟ್ಟಿ ಕೊಡಲಾರವು.ಡಾ.ಅಂಬೇಡ್ಕರ್ ಬದುಕಿನ ಕಟ್ಟ ಕಡೆಯ ಕೆಲವು ದೃಢ ಸಂಕಲ್ಪಗಳು ಇಂದಿನ ತಲೆಮಾರಿನಲ್ಲಿ ಅವರ ವೈಭವೀಕರಣ, ಅಭಿಮಾನದ ಆಚರಣೆ ಗಳೊಂದಿಗೆ ಕಳೆದು ಹೋಗುತ್ತಿವೆ ಎಂದರು.
ಇಂದಿನ ಪೀಳಿಗೆ ಅಂಬೇಡ್ಕರ್ ತೋರಿಸಿದ ಬುದ್ಧ ಮಾರ್ಗ ಮತ್ತು ಸ್ವತಂತ್ರ ರಾಜ್ಯಾಧಿಕಾರದ ಕನಸನ್ನು ನನಸು ಮಾಡಬೇಕೆಂದು ಪ್ರಶಾಂತ್ ತೊಟ್ಟಂ ಕರೆ ನೀಡಿದರು. ಕಾರ್ಯಕ್ರಮದಲ್ಲಿ ತ್ರಿಸರಣ ಹಾಗೂ ಪಂಚಶೀಲವನ್ನು ಪಠಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯರಾದ ಜಗನ್ನಾಥ ಪೂಜಾರಿ, ದಲಿತ ಮುಖಂಡ ಸುಂದರ್ ಕಪ್ಪೆಟ್ಟು, ಸಂಘದ ಅಧ್ಯಕ್ಷ ರವೀಂದ್ರ, ಹರೀಶ್ ಸಾಲ್ಯಾನ್, ಸುಮಿತ್ ನೆರ್ಗಿ, ಗುಣವಂತ ಪಾಲನ್, ಸತೀಶ ಜಿ.ಕೆ., ಶಶಿಕಲಾ ಹರೀಶ್, ಶಾರದಾ ಬಾಪುತೋಟ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಲೋಹಿತ್ ಬಂಗೇರ ಸ್ವಾಗತಿಸಿ, ವಂದಿಸಿದರು.








