"ರೈತರು ಬೀದಿಗಿಳಿದು ಹೋರಾಡುತ್ತಿದ್ದರೆ ಪ್ರಧಾನಿ ತಮಗಾಗಿ ಅರಮನೆ ನಿರ್ಮಿಸುತ್ತಿದ್ದಾರೆ"
ಸಂಸತ್ ಭವನ ಯೋಜನೆಗೆ ಕಾಂಗ್ರೆಸ್ ಟೀಕೆ

ಹೊಸದಿಲ್ಲಿ, ಡಿ.10: ನೂತನ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಗುರುವಾರ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿರುವುದನ್ನು ಟೀಕಿಸಿರುವ ಕಾಂಗ್ರೆಸ್, ರೈತರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡುತ್ತಿದ್ದರೆ ಪ್ರಧಾನಿ ತಮಗಾಗಿ ಭವ್ಯ ಬಂಗಲೆಯನ್ನು ಕಟ್ಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
‘ಮಿ. ಮೋದಿ, ದೇಶದ ಅನ್ನದಾತರು 16 ದಿನಗಳಿಂದ ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ ನೀವು ಸೆಂಟ್ರಲ್ ವಿಸ್ತದ ಹೆಸರಿನಲ್ಲಿ ನಿಮಗಾಗಿ ಅರಮನೆಯೊಂದನ್ನು ಕಟ್ಟಿಸುತ್ತಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಎಂಬುದು ಖಯಾಲಿಗಳನ್ನು ತೀರಿಸಿಕೊಳ್ಳಲು ಇರುವ ಸಾಧನವಲ್ಲ, ಅದು ಸಾರ್ವಜನಿಕ ಸೇವೆ ಮತ್ತು ಸಾರ್ವಜನಿಕ ಹಿತಚಿಂತನೆಗೆ ಇರುವ ಮಾಧ್ಯಮವಾಗಿದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ರೈತರು ಎಂಬ ಹ್ಯಾಷ್‌ಟ್ಯಾಗ್‌ನಡಿ ಟ್ವೀಟ್ ಮಾಡಿದ್ದಾರೆ.
ನೂತನ ಸಂಸತ್ ಭವನ ನಿರ್ಮಾಣಕ್ಕೆ 1,000 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಕೊರೋನ ಸೋಂಕು ಹಾಗೂ ಆರ್ಥಿಕ ಹಿಂಜರಿತದ ಅವಳಿ ಸಮಸ್ಯೆಯ ನಡುವೆಯೂ ಈ ಬೃಹತ್ ವೆಚ್ಚದ ಯೋಜನೆಯ ಅಗತ್ಯವಿತ್ತೇ ಎಂದು ವಿಪಕ್ಷಗಳು ಟೀಕಿಸಿವೆ. ಸೆಂಟ್ರಲ್ ವಿಸ್ತ ಯೋಜನೆಯನ್ನು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಗಿಯುವವರೆಗೆ ನಿರ್ಮಾಣ ಕಾರ್ಯ ಆರಂಭಿಸಬಾರದು ಎಂದು ಸುಪ್ರೀಂಕೋರ್ಟ್ ಕಳೆದ ವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.







