ನನಸು ಚಿತ್ರದ ಟೈಟಲ್ ಬಿಡುಗಡೆ
ಉಡುಪಿ, ಡಿ.10: ಸನ್ ಇಂಕ್ ನಿರ್ಮಾಣದ ‘ನನಸು’ ಕನ್ನಡ ಚಲನಚಿತ್ರದ ಟೈಟಲ್ ಬಿಡುಗಡೆ ಸಮಾರಂಭ ಇದು ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. ಚಿತ್ರದ ನಿರ್ದೇಶಕ ನೇಮರಾಜ್ (ದಿನೇಶ್ ಶಿರಿಯಾರ), ನಾಯಕ ಎಂ.ಎಸ್.ವಿಶ್ವನಾಥ್, ನಾಯಕಿ ಸಂಗೀತ ಮುಲ್ಕಿ, ನಟ ಮಣಿ ಕುಮಾರ್ ಟೈಟಲ್ ಬಿಡುಗಡೆಗೊಳಿಸಿದರು.
ಹೊಸಮುಖ ಪ್ರತಿಭೆಗಳು ಹಾಗೂ ನಿರತ ಕಲಾವಿದರ ಬಳಗವನ್ನು ಹೊಂದಿರುವ ಈ ಚಿತ್ರ ಇದೀಗ ನಿರ್ಮಾಣ ಹಂತದಲ್ಲಿದೆ. ಮುಕ್ಕಾಲು ಭಾಗದ ಚಿತ್ರೀಕರಣ ಈಗಾಗಲೇ ಶಿರಿಯಾರ, ಹೆಸ್ಕತ್ತೂರು, ಬಾರಕೂರು ಆಸುಪಾಸಿನಲ್ಲಿ ನಡೆದಿದೆ ಎಂದು ನಿರ್ದೇಶಕ ನೇಮರಾಜ್ ತಿಳಿಸಿದರು.
ಕೊರೋನ ಕಾರಣದಿಂದ ಚಿತ್ರ ನಿರ್ಮಾಣ ಕಾರ್ಯಕ್ಕೆ ತೊಡಕಾಗಿದ್ದು, ಇದೀಗ ಮತ್ತೆ ಶೂಟಿಂಗ್ ಶುರುವಾಗಲಿದೆ. ಮುಂದಿನ ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಮುಗಿಯಲಿದ್ದು, ಮುಂದೆ ಉಳಿದ ಕೆಲಸಗಳನ್ನು ಪೂರೈಸಿ ಬಿಡುಗಡೆಯ ದಿನವನ್ನು ನಿರ್ಧರಿಸಲಾಗುವುದು ಎಂದರು.
ಎಂ.ಎಸ್.ವಿಶ್ವನಾಥ್ ನಾಯಕರಾಗಿ ಅಭಿನಯಿಸಿದ್ದು, ಸಂಗೀತ ಮುಲ್ಕಿ ಹಾಗೂ ಶ್ವೇತಪ್ರಿಯ ನಾಯಕಿಯರು. ಎಂ.ಕೆ.ಮಠ್ ಖಳನಾಯಕರಾಗಿ ಅಭಿನಯಿಸಿದ್ದಾರೆ. ಆನಂದ್ ರಾಜವಿಕ್ರಮ್ ಸಂಗೀತ, ಯೋಗಾನಂದ ಛಾಯಾಗ್ರಹಣ ಚಿತ್ರಕ್ಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಎಸ್.ವಿಶ್ವನಾಥ್, ಸಂಗೀತ ಮುಲ್ಕಿ, ನಟರಾದ ಮಣಿಕುಮಾರ್, ನಿತಿನ್ ಸುಬ್ರಹ್ಮಣ್ಯ, ರಮೇಶ್ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.







