ಗೋಹತ್ಯೆ ನಿಷೇಧ ಮಸೂದೆ ಹೇಗೆ ಅಂಗೀಕರಿಸಬೇಕೆಂದು ಗೊತ್ತಿದೆ: ಆರ್.ಅಶೋಕ್

ಬೆಂಗಳೂರು, ಡಿ, 10: ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕವನ್ನು ಹೇಗೆ ಅಂಗೀಕರಿಸಬೇಕೆಂದು ನಮಗೆ ಗೊತ್ತಿದೆ. ಮುಂದಿನ ಸಚಿವ ಸಂಪುಟದವರೆಗೆ ಕಾದು ನೋಡಿ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಪರಿಷತ್‍ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಲು ಸಾಧ್ಯವಾಗದಿರುವುದರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾಪವನ್ನು ಗುರುವಾರವೇ ಮುಕ್ತಾಯಗೊಳಿಸಲಾಗುವುದೆಂಬ ಪ್ರಸ್ತಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಆಗಿರಲಿಲ್ಲ. ಸಭಾಪತಿ ಕಾನೂನು ಮೀರಿ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿದ್ದಾರೆಂದು ಆರೋಪಿಸಿದ್ದಾರೆ.
ವಿಧಾನಪರಿಷತ್‍ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಯಾಗದಂತೆ ಕಾಂಗ್ರೆಸ್-ಜೆಡಿಎಸ್ ಸಂಚು ರೂಪಿಸಿದ್ದವು. ನಾವು ಅವರಿಗಿಂತ ಚಾಣಾಕ್ಷರು. ಮಸೂದೆ ಹೇಗೆ ಅಂಗೀಕಾರಗೊಳ್ಳುತ್ತದೆ ಎಂಬುದರ ಬಗ್ಗೆ ಮುಂದಿನ ಸಚಿವ ಸಂಪುಟದವರೆಗೆ ಕಾದು ನೋಡಿ ಎಂದು ಅವರು ತಿಳಿಸಿದ್ದಾರೆ.
ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಕಲಾಪವನ್ನು ಕಾನೂನು ಬಾಹಿರವಾಗಿ ಮುಂದೂಡಿರುವುದರ ಬಗ್ಗೆ ನಾಳೆ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸುತ್ತೇವೆ. ಆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.







